
ಆರಾಧನೆ
ಮನಸೆಲ್ಲಾ ನೀನೇ
ಕನಸಲ್ಲೂ ನೀನೇ
ಕಣ್ಣು ಮುಚ್ಚಿದರೂ
ಬಿಚ್ಚಿದರೂ
ಎಲ್ಲೆಲ್ಲೂ ನೀನೇ
ಅರಿಕೆ
ಹೇಗಾದರೂ
ಇರಲಿ
ಬದುಕಿನ ರೀತಿ
ಇರಲಿ
ಜೀವನ ಪ್ರೀತಿ
ರೀತಿ
ಅವನಿಗೆ
ಸಂಘಟನೆಯಲ್ಲಿ
ಆಸಕ್ತಿ;
ಅವಳಿಗೆ ಬರವಣಿಗೆಯಲ್ಲಿ.
ವಿಪಯರ್ಾಸವೆಂದರೆ
ಆತ
ನುಡಿದಂತೆ
ನಡೆಯಲಿಲ್ಲ
ಆಕೆ
ಬರೆದಂತೆ
ಬದುಕಲಿಲ್ಲ
ಸುಂದರಿ
ಐಶ್ವರ್ಯ ರೈ
ವಿಶ್ವಸುಂದರಿ
ಸುಷ್ಮಿತಾ ಸೇನ್
ಭುವನಸುಂದರಿ
ನನ್ನ
ಭುವನ
ಸುಂದರಿ!
ಧ್ಯಾನ
ಅವನಿಗೀಗ
ನಿದ್ರೆ ಮಾಡಲೂ
ವ್ಯವಧಾನವಿಲ್ಲ
ಕಾರಣ
ಸದಾ ಅವಳದೇ
ಧ್ಯಾನ!
ಇಷ್ಟ
ಇಷ್ಟ ಪಡುವಾಗ
ಅವನ ಇಷ್ಟವೇ
ಅವಳ ಇಷ್ಟ
ಈಗ
ಮಾತನಾಡುವುದೇ ಕಷ್ಟ
ಯಾತ್ರೆ
ನೀ
ಒಲಿದರೆ
ಕಾಶಿಯಾತ್ರೆ
ಒಲಿಯದಿದ್ದರೆ
ಕಾಶಿಗೆ ಯಾತ್ರೆ!
ಕಷ್ಟ
ನಿನಗೆ
ನನ್ನ ನೆನಪಾಗುವುದೇ
ಕಷ್ಟ
ನನಗೆ
ನಿನ್ನ ಮರೆಯುವುದೇ
ಕಷ್ಟ
ಬದುಕು
ನನ್ನ ಬದುಕು-
ನೀ ಒಲಿದರೆ
ಹೂವಿನ ಹಾದಿ
ಮುನಿದರೆ
ಕಲಾಸಿಪಾಳ್ಯ ಬೀದಿ!
ಮಹಾಶಯ!
ಮೊದಲೆಲ್ಲಾ
ಹುಡುಗಿ
ಸಿಕ್ಕಿದರೆ ಸಾಕೆಂದು
ಹುಡುಕುತ್ತಿದ್ದ
ಈಗ
ಬಿಟ್ಟು ಹೋದರೆ
ಸಾಕೆಂದು
ಸಿಡುಕುತ್ತಿದ್ದಾನೆ
ತ್ಯಾಗ
ಮೊದಲು
ನನಗಾಗಿ
ಮಾಂಸ
ಬಿಟ್ಟಿದ್ದಳು
ಈಗ
ನನ್ನನ್ನೇ ಬಿಟ್ಟಿದ್ದಾಳೆ
ಮನಸ್ಸು
ಮನಸ್ಸೆಲ್ಲೋ
ಓಡುತ್ತಿದೆ
ದಾರಿ ಸಿಗದೆ
ಹಿಂತಿರುಗುತ್ತಿದೆ
ನೆನಪು
ಮರೆಯಬೇಕು
ಅಂದುಕೊಂಡರೂ
ಮತ್ತೆ ಮತ್ತೆ
ನೆನಪಾಗುವುದು
ಅವಳ
ಪ್ರೀತಿಯಲ್ಲದೆ
ಮತ್ತಿನ್ನೇನು?
ಸನಿಹ
ಎಲ್ಲಿದ್ದರೇನು ನೀನು
ಇಲ್ಲಿಲ್ಲವೇ
ನನ್ನ ಎದೆಯಲ್ಲಿ
ಹೇಗಿದ್ದರೇನು ನಾನು
ನಿನ್ನ ನೆನಪಿಲ್ಲವೇ
ನನ್ನ ಜೊತೆಯಲ್ಲಿ
ಒನ್ ವೇ
ಬೆಂಗಳೂರಿನ
ರಸ್ತೆಗಳಂತೆಯೇ
ಆಗಿ ಹೋಗಿದೆ
ನನ್ನ ಪ್ರೀತಿ
ಬರೀ
ಒನ್ ವೇ!
ಪಾಠ
ಒಂದು
ಸಂಬಂಧ
ಮುರಿದು ಹೋದರೆ
ಬದುಕೇ
ಮುಗಿದು ಹೋಗುವುದಿಲ್ಲ
ಜೋರು ಗಾಳಿಗೆ
ಗೂಡು
ಹಾರಿಹೋತೆಂದು
ಹಕ್ಕಿಗಳು
ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ
No comments:
Post a Comment