ಸೋಲಿಗೂ, ಗೆಲುವಿಗೂ ಸಿದ್ಧ ಮಾದರಿ ಎಂಬುದಿರುವುದಿಲ್ಲ.
ಗೆಲುವಿನ ಮೈಮರೆವು ಸೋಲಿಗೆ ದಾರಿಯಾಗಬಹುದು.
ಸೋಲು ಮೂಡಿಸಿದ ಅರಿವು ಗೆಲುವಿನತ್ತ ಕೊಂಡೊಯ್ಯಬಹುದು.
ಭಾರತ ತಂಡ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ 0-4 ಅಂತರದಿಂದ ಸೋತಿದ್ದಾಗಿದೆ.
ಇನ್ನು ಟಿ20 ಹಾಗೂ ಏಕದಿನ ಸರಣಿಗಳ ಸರದಿ.
ಅಲ್ಲಿ ಸೋತ ಭಾರತ ಇಲ್ಲಿಯೂ ಸೋಲಲೇಬೇಕೆಂದೇನೂ ಇಲ್ಲ.
ಭಾರತ ಗೆಲ್ಲುವುದು ಕಷ್ಟ, ಸೋತೇ ಹೋಗಲಿದೆ ಎಂಬ ಆತಂಕವೂ ಬೇಡ.
ಏಕೆಂದರೆ ಭಾರತ ಟೆಸ್ಟ್ ಸರಣಿಯಲ್ಲಿ ಎದುರಿಸಿದ ಇಂಗ್ಲೆಂಡ್ ತಂಡವೇ ಬೇರೆ.
ಏಕದಿನ ಸರಣಿಯಲ್ಲಿ ಎದುರಾಗುವ ಇಂಗ್ಲೆಂಡ್ ತಂಡವೇ ಬೇರೆ.
ಇತ್ತೀಚಿನ ವರ್ಷಗಳಲ್ಲಿ ಏಕದಿನ ಪಂದ್ಯಗಳು ಜಗತ್ತಿನ ಯಾವ ಮೂಲೆಯಲ್ಲಿ ನಡೆದರೂ ಅಂಥ ವ್ಯತ್ಯಾಸವೇನೂ ಆಗುವುದಿಲ್ಲ. ತವರಿನ ಅನುಕೂಲವೆಂಬ ಅಂಶವೀಗ ಗೌಣವಾಗಿದೆ.
ಭಾರತದ ವಿಷಯಕ್ಕೆ ಬಂದರೆ ಧೋನಿ ಬಳಗ ವಿಶ್ವ ಚಾಂಪಿಯನ್. ಟೆಸ್ಟ್ ತಂಡದಲ್ಲಿ ಭಾರತದ ಯಶಸ್ಸಿಗೆ ಅನುಭವಿ ತ್ರಿವಳಿಗಳ ಆಟ ನಿರ್ಣಾಯಕವಾಗಿದ್ದರೆ, ಏಕದಿನಗಳಲ್ಲಿ ಭಾರತ ಆ ಅವಲಂಬನೆಯಿಂದ ಯಾವಾಗಲೋ ಹೊರಗೆ ಬಂದಿದೆ.
ವೀರೇಂದ್ರ ಸೆಹ್ವಾಗ್ ಗೈರು ದೊಡ್ಡ ಕೊರತೆಯೇ ಹೌದು. ಆದರೂ, ಏಕದಿನಗಳಲ್ಲಿ ಭಾರತದ ಸಾಮರ್ಥ್ಯ ಯಾವುದೇ ಒಬ್ಬ ಆಟಗಾರನಿಗೆ ಸೀಮಿತಗೊಂಡಿಲ್ಲ. ತೆಂಡುಲ್ಕರ್, ಗಂಭೀರ್, ಕೊಹ್ಲಿ, ರೈನಾ, ರೋಹಿತ್, ಧೋನಿ ಇರುವ ಭಾರತ ತಂಡದೆದರು ಆತಂಕ ಪಡಬೇಕಿರುವುದು ಇಂಗ್ಲೆಂಡ್.
ಒಂದು ಮುಖ್ಯ ವಿಷಯವೆಂದರೆ ಇಂಗ್ಲೆಂಡ್ ನ ಪರಮ ಆದ್ಯತೆ ಏಕದಿನ ಕ್ರಿಕೆಟ್ ಅಲ್ಲ. ಅವರು ವಿಶ್ವಕಪ್ ಗೆದ್ದಿಲ್ಲ ಎಂಬ ಅವಮಾನವನ್ನು ಆಶಸ್ ಗೆದ್ದಿದ್ದೇವೆ ಎಂಬ ಸಂಭ್ರಮದಲ್ಲೇ ಮರೆಯುವವರು.
ಈ ವರ್ಷ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಆಶಸ್ ಸರಣಿ ಗೆದ್ದ ಮೇಲೆ ಇಂಗ್ಲೆಂಡ್ ಏಕದಿನ ಸರಣಿಯಲ್ಲಿ 1-6 ಅಂತರದಿಂದ ಸೋತು ಹೋಯಿತು. ವಿಶ್ವಕಪ್ ನಲ್ಲೂ ಕ್ವಾರ್ಟರ್ ಫೈನಲ್ ಗಿಂತ ಮೇಲೆ ಬರಲಿಲ್ಲ. ಆದರೆ ಆ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದೂ ಇಲ್ಲ.
ಈಗಲೂ ಅಷ್ಟೇ ಭಾರತದ ವಿರುದ್ಧ ಏಕದಿನ ಸರಣಿ ಗೆದ್ದರೆ ಅವರಿಗದು ಬೋನಸ್. ವಿಶ್ವ ಚಾಂಪಿಯನ್ನರ ವಿರುದ್ಧ ಗೆದ್ದೆವು ಎಂದು ಬೀಗುತ್ತಾರೆ. ಅದೇ ಸೋತರೆ, ಅವರಿಗೆ ಬೇಸರವೇನೂ ಇಲ್ಲ. ಟೆಸ್ಟ್ ಸರಣಿ ಗೆದ್ದು ವಿಶ್ವ ನಂ.1 ಆಗಿದ್ದೇವೆಲ್ಲಾ ಅದೇ ಯಥೇಚ್ಛ ಎನ್ನುತ್ತಾರವರು.
ಭಾರತಕ್ಕಿದು ಪ್ರತಿಷ್ಠೆಯ ಸರಣಿ. ತವರಿನಲ್ಲಿ ವಿಶ್ವಕಪ್ ಗೆದ್ದ ಮೇಲೆ ಭಾರತ ವಿಂಡೀಸ್ ನಲ್ಲಿ ಗೆದ್ದಿರಬಹುದು. ಆದರೆ, ಗಂಭೀರ ಸವಾಲು ಎದುರಾಗುತ್ತಿರುವುದು ಇಂಗ್ಲೆಂಡ್ ನಲ್ಲೇ. ಆದರೆ, ತಂಡ ಸೂಕ್ತ ಮನೋಸ್ಥಿತಿಯಿಂದ ಸರಣಿ ಪ್ರವೇಶಿಸುತ್ತಿದೆಯೇ?
ಭಾರತ ಬಲಾಢ್ಯ ತಂಡವೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಹೊಸ ಕೋಚ್ ಡಂಕನ್ ಫ್ಲೆಚರ್ ಒಡನಾಟ ಆಟಗಾರರಿಗಿನ್ನೂ ಹೊಸದು. ಅವರ ತರಬೇತಿ ವಿಧಾನಗಳು, ಅವರ ಮನೋಸ್ಥಿತಿ, ವಿಚಾರ ಲಹರಿ ಇವೆಲ್ಲವೂ ಇನ್ನೂ ಪೂರ್ತಿಯಾಗಿ ಅರ್ಥವಾಗಬೇಕು.
ಇಂಗ್ಲೆಂಡ್ ಕೋಚ್ ಆಗಿದ್ದಾಗ ಫ್ಲೆಚರ್ ಯಾವತ್ತೂ ಏಕದಿನಗಳಿಗೆ ಮಹತ್ವ ನೀಡಿರಲಿಲ್ಲ. ಟೆಸ್ಟ್ ಸಾಧನೆಗಳ ಬಗ್ಗೆ ಮಾತ್ರ ಅವರು ಗಮನ ಕೊಟ್ಟಿದ್ದರು. ಹಾಗೆಂದೇ ತಂಡ 50 ಓವರ್ ಮಾದರಿಯಲ್ಲಿ ಪ್ರಪಾತಕ್ಕೆ ಬಿದ್ದಿತ್ತು. ಅಂಥ ಫ್ಲೆಚರ್ ಕೈಗೆ ಈಗ ವಿಶ್ವ ಚಾಂಪಿಯನ್ ಭಾರತದ ಚುಕ್ಕಾಣಿ ದೊರೆತಿದೆ.
ಫ್ಲೆಚರ್ ನೇಮಕಾತಿ ನಡೆದು ತಿಂಗಳುಗಳೇ ಕಳೆದುಹೋಗಿರುವುದರಿಂದ ಅವರು ಈ ಹುದ್ದೆಗೆ ಸೂಕ್ತರೇ ಎಂದು ಈಗಲೂ ಚರ್ಚೆ ಮಾಡುವುದು ಸರಿಯಲ್ಲ. ಆದರೂ, ಟೆಸ್ಟ್ ಸರಣಿಯಲ್ಲಿ ಫ್ಲೆಚರ್ ವಿಚಾರ ಶೂನ್ಯರಾಗಿದ್ದರು. ಇಂಗ್ಲೆಂಡ್ ನ ವ್ಯೂಹಗಳ ಎದುರು ಇವರು ತಲೆ ಮೇಲೆ ಕೈಹೊತ್ತು ಕುಳಿತಿದ್ದರು. ಏಕದಿನಗಳಲ್ಲಿ ಹಾಗಾಗದಿದ್ದರೆ ಸಾಕು.
ಅಂದ ಹಾಗೆ ಆಯ್ಕೆಗಾರರು ರಾಹುಲ್ ದ್ರಾವಿಡ್ ಗೆ ಏಕದಿನಗಳಿಂದ ದೊಡ್ಡ ರೀತಿಯಲ್ಲಿ ವಿದಾಯ ಹೇಳಲು ಅವಕಾಶ ಮಾಡಿಕೊಟ್ಟಿದ್ದಾರೆ. ವಿದಾಯ ಸರಣಿಗಾಗಿ ಸ್ವತಃ ದ್ರಾವಿಡ್ ಏನೂ ಕೋರಿರಲಿಲ್ಲ. ಆದರೆ, ವಿಶ್ವ ಕಪ್ ಗೆ ನಿಮ್ಮ ಅಗತ್ಯವಿಲ್ಲ ಎಂದಿದ್ದ ಆಯ್ಕೆಗಾರರು ಇಂಗ್ಲೆಂಡ್ ನಲ್ಲಿ ಆಡಿ ಎಂದು ಆಹ್ವಾನ ನೀಡಿದ್ದು ದ್ರಾವಿಡ್ ರಂಥ ಮೇರು ಆಟಗಾರನಿಗೆ ಮಾಡಿದ ಅವಮಾನ. ಅದೇ ಕಾರಣಕ್ಕೆ ಅವರು ಏಕದಿನಗಳಿಂದ ವಿದಾಯ ಪ್ರಕಟಿಸಿದರು. ಅದೇನೇ ಇರಲಿ. ಉತ್ತುಂಗ ಫಾರ್ಮ್ ನಲ್ಲಿರುವ ದ್ರಾವಿಡ್ ಈ ಸರಣಿ ಅವಿಸ್ಮರಣಿಯವಾಗಿಸಿಕೊಳ್ಳಲು ಯತ್ನಿಸಲಿದ್ದಾರೆ.
ಟೆಸ್ಟ್ ತಂಡಕ್ಕೆ ಪರಿಗಣನೆಯಲ್ಲಿರಬೇಕಾದ ಅಜಿಂಕ್ಯ ರಹಾನೆ ಏಕದಿನ ತಂಡಕ್ಕೆ ಆಯ್ಕೆ ಆಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಹಾಲಿ ಸರಣಿಯಲ್ಲಿ ಅವರಿಗೆ ಅವಕಾಶ ಸಿಗುವುದು ಅನುಮಾನ. ಗಂಭೀರ್, ತೆಂಡುಲ್ಕರ್, ದ್ರಾವಿಡ್, ಕೊಹ್ಲಿ, ರೈನಾ, ರೋಹಿತ್, ಧೋನಿ ಮಧ್ಯೆ ರಹಾನೆ ನುಸುಳುವುದು ಬಹಳ ಕಷ್ಟ. ಆದರೂ, ಅವರು ಇಂದಲ್ಲ ನಾಳೆ ಭಾರತದ ಪರ ಆಡಲೇಬೇಕಾದ ಉತ್ತಮ ಆಟಗಾರ.
No comments:
Post a Comment