Tuesday, June 9, 2009

ರಾಗ ಲಹರಿ



ಮಣ್ಣಿನಲ್ಲಿ ಅರಳಿದ ಹೂವು

ರೋಜರ್‌ ಫೆಡರರ್‌ ಕೊನೆಗೂ ಫ್ರೆಂಚ್‌ ಓಪನ್‌ ಜಯಿಸಿದ್ದಾರೆ. ಈ ಬಾರಿ ಫೈನಲ್‌ನಲ್ಲಿ ರಾಫೆಲ್‌ ನಡಾಲ್‌ ಎದುರಾಳಿಯಾಗಿರಲಿಲ್ಲ. ಹಾಗೆಂದು, ಸ್ವಿಸ್‌ ದೊರೆಯ ವಿಜಯದ ಮೌಲ್ಯವೇನೂ ಕಡಿಮೆಯಾಗುವುದಿಲ್ಲ. ಅಷ್ಟಕ್ಕೂ ಎಲ್ಲಾ ನಾಲ್ಕು ಗ್ರಾಂಡ್‌ಸ್ಲಾಂಗಳನ್ನು ಗೆದ್ದ ಕೇವಲ ಆರು ಮಂದಿಯಲ್ಲಿ ಫೆಡೆಕ್ಸ್‌ ಸಹ ಒಬ್ಬರಾಗಿದ್ದಾರೆ. ಸದ್ಯ ಪೀಟ್‌ ಸಾಂಪ್ರಾಸ್‌ ಜೊತೆ ಸಾರ್ವಕಾಲಿಕ ಗರಿಷ್ಠ 14 ಗ್ರಾಂಡ್‌ಸ್ಲಾಂ ಸಾಧನೆ ಹಂಚಿಕೊಂಡಿರುವ ಫೆಡರರ್‌ ಮುಂದಿನ ಗುರಿ ಇನ್ನಷ್ಟು ಟ್ರೋಫಿಗಳನ್ನು ಗೆಲ್ಲುವುದು.



ಶ್ರೇಷ್ಠತೆ ಎನ್ನುವುದೊಂದು ವಿದ್ಯೆಯಲ್ಲ. ನಿಧಿಯೂ ಅಲ್ಲ. ಕನಸು ಕಾಣುವುದರಿಂದ, ಗೊತ್ತುಗುರಿಯಿಲ್ಲದ ಪರಿಶ್ರಮದಿಂದ ಅಥವಾ ಹಣಬಲದಿಂದ ಅದನ್ನು ಗಳಿಸಲು ಸಾಧ್ಯವಿಲ್ಲ.
ಹಣದಿಂದ, ಪ್ರಭಾವದಿಂದ ಕೀರ್ತಿಯನ್ನು ಗಳಿಸಬಹುದು ಆದರೆ, ಶ್ರೇಷ್ಠತೆಯನ್ನಲ್ಲ.
ಹಾಗೆ ನೋಡಿದರೆ, ಹುಡುಕಿಕೊಂಡು ಪ್ರಯಾಣ ಹೊರಡುವುದಕ್ಕೆ ಅದೊಂದು ಗಮ್ಯ ಸ್ಥಾನವೂ ಅಲ್ಲ. ಪ್ರಯತ್ನಪೂರ್ವಕವಾಗಿ ಸಾಧಿಸಬಹುದಾದ ಸಾಧನೆಯೂ ಅದಲ್ಲ. ಶ್ರೇಷ್ಠತೆ ಒಲಿಯಬೇಕೇ ಹೊರತು, ಹಟಬಿದ್ದು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಅರ್ಹರನ್ನು ಶ್ರೇಷ್ಠತೆ ಹಿಂಬಾಲಿಸುತ್ತದೆ. ಅದು ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಾಗಿ ಅನುಭವಕ್ಕೆ ಬರುತ್ತದೆ.
ಶ್ರೇಷ್ಠತೆಯೆನ್ನುವುದು ಗೌರವ ಡಾಕ್ಟರೇಟ್‌ ಪದವಿಯಂತಲ್ಲ. ಯಾರನ್ನು ಬೇಕಾದರೂ ಅದು ಅಲಂಕರಿಸುವುದಿಲ್ಲ. ಆದರೆ, ನಿತ್ಯಜೀವನದಲ್ಲಿ ಈ ಎಲ್ಲಾ ಪದಗಳ ಅರ್ಥ-ಮೌಲ್ಯಗಳನ್ನು ಅಪಭ್ರಂಶಗೊಳಿಸುವುದರಲ್ಲೇ ನಾವು ಖುಷಿ ಪಡುತ್ತೇವೆ. ಹಲವು ಬಾರಿ ವ್ಯಕ್ತಿಯನ್ನು- ಸಂಗತಿಯನ್ನು ಹೊಗಳುವಾಗ ಶ್ರೇಷ್ಠಕ್ಕೂ- ಅತ್ಯುತ್ತಮಕ್ಕೂ ವ್ಯತ್ಯಾಸವನ್ನು ಮರೆಯುತ್ತೇವೆ. ಅತ್ಯುತ್ತಮ (ಚಿಛಿಠಿ) ಆಟಗಾರ ಎಂದು ಬರೆಯುವಲ್ಲಿ ಶ್ರೇಷ್ಠ (ಎ್ಟಛಿಠಿ) ಆಟಗಾರ ಎಂದೇ ಬರೆಯುತ್ತೇವೆ.
ಫ್ರೆಂಚ್‌ ಓಪನ್‌ ಜಯಿಸಿ ಟೆನಿಸ್‌ ಇತಿಹಾಸದ ಶ್ರ್ರೇಷ್ಠರ ಯಾದಿಯಲ್ಲಿ ಸ್ಥಾನ ಕಲ್ಪಿಸಿಕೊಂಡ ರೋಜರ್‌ ಫೆಡರರ್‌ ಬಗ್ಗೆ ಬರೆಯುವಾಗ ಇಷ್ಟೆಲ್ಲಾ ಹೇಳಬೇಕಾಯಿತು.
ಪರ್ವತವೊಂದು ಕುಭ್ಜವೆನಿಸಬೇಕಾದರೆ, ಅದಕ್ಕಿಂತ ಎತ್ತರದ ಇನ್ನೊಂದು ಪರ್ವತ ಪಕ್ಕದಲ್ಲಿರಬೇಕು. ವೃತ್ತಿಪರ ಟೆನಿಸ್‌ನಲ್ಲಿ ಈ ಹಿಂದೆ ಶಿಖರ ಸಾಧನೆ ಮಾಡಿರುವ ಅದೆಷ್ಟೋ ಮಹಾನುಭಾವರ ಸಾಹಸಗಳು ಈ ರೋಜರ್‌ ಫೆಡರರ್‌ ಎದುರು ಸಣ್ಣದೆನಿಸಿಬಿಡುತ್ತವೆ. ಸ್ವಿಟ್ಜರ್ಲೆಂಡ್‌ನ ಈ ಸಜ್ಜನ 27ರ ಪ್ರಾಯದಲ್ಲೇ 14 ಗ್ರಾಂಡ್‌ಸ್ಲಾಂ ಗೆದ್ದು, ಇನ್ನಷ್ಟು ಗೆಲ್ಲುವತ್ತ ಮುನ್ನುಗ್ಗುತ್ತಿರುವುದು ಅದಕ್ಕೆ ಕಾರಣ.
ಕಳೆದ ಆರು ವರ್ಷಗಳಿಂದ ಫೆಡರರ್‌ ಅವರನ್ನು ಸಾರ್ವಕಾಲಿಕ ಶ್ರೇಷ್ಠರ ಪಟ್ಟಿಗೆ ಸೇರಿಸಲು ಎಲ್ಲಾ ಪಂಡಿತರು ತವಕದಿಂದಿದ್ದರು. ಆದರೆ, ಅದಕ್ಕೆ ಒಂದು ಕೊರತೆ ಅಡ್ಡಿಯಾಗಿತ್ತು. ಸತತವಾಗಿ ಹಾಗೂ ತಲಾ ಐದು ಬಾರಿ ವಿಂಬಲ್ಡನ್‌ ಮತ್ತು ಯುಎಸ್‌ ಓಪನ್‌ ಗೆದ್ದಿರುವ, ಮೂರು ಬಾರಿ ಆಸ್ಟ್ರೇಲಿಯನ್‌ ಓಪನ್‌ ಗೆದ್ದಿರುವ ಫೆಡರರ್‌ ಫ್ರೆಂಚ್‌ ಓಪನ್‌ನಲ್ಲಿ ಮಾತ್ರ ಮುಗ್ಗರಿಸುತ್ತಿದ್ದರು. ರೋಲಾಂಡ್‌ ಗ್ಯಾರೋಸ್‌ನ ಕೆಂಪು ಮಣ್ಣು ಫೆಡರರ್‌ರನ್ನು ಮತ್ತಷ್ಟು ಕೊಳೆಯಾಗಿಸಿತ್ತು. ಸತತವಾಗಿ ಮೂರು ವರ್ಷ ಫೈನಲ್‌ವರೆಗೆ ಸಾಗಿದ್ದರೂ, ಪ್ರಶಸ್ತಿಯ ಅದೃಷ್ಟ ಒಲಿದಿರಲಿಲ್ಲ. ಎಷ್ಟೆಲ್ಲಾ ಮಹಾ ಸಾಧನೆ ಮಾಡಿದರೂ, ಫ್ರೆಂಚ್‌ ಓಪನ್‌ನಲ್ಲಿ ಮಾತ್ರ ವಿಫಲರಾದ ಪೀಟ್‌ ಸಾಂಪ್ರಾಸ್‌ರಂಥವರ ಸಾಲಿಗೆ ಫೆಡರರ್‌ ಸೇರುವ ಅಪಾಯ ಹೆಚ್ಚಾಗಿತ್ತು. ಕೊನೆಗೂ ಭಾನುವಾರ ಫೆಡೆಕ್ಸ್‌ ಆ ಕೊರತೆಯಿಂದ, ಕಳಂಕದಿಂದ ಮುಕ್ತರಾದರು.
ಫೆಡರರ್‌ ಫ್ರೆಂಚ್‌ ಓಪನ್‌ ಏನೋ ಗೆದ್ದರು. ಎಲ್ಲಾ ನಾಲ್ಕು ಗ್ರಾಂಡ್‌ಸ್ಲಾಂ ಗೆದ್ದ ಇತಿಹಾಸದ ಕೇವಲ 6 ಮಂದಿಯಲ್ಲಿ ಒಬ್ಬರಾದರು. ಮೂರು ವಿಭಿನ್ನ ಬಗೆಯ ಅಂಗಣಗಳಲ್ಲಿ ಗ್ರಾಂಡ್‌ಸ್ಲಾಂ ಗೆದ್ದ ಕೇವಲ 2ನೆಯವರೆನಿಸಿದರು (ಅಗಾಸ್ಸಿ ಮೊದಲ ಸಾಧಕ- ಹುಲ್ಲು, ಗಟ್ಟಿ ಹಾಗೂ ಮಣ್ಣಿನ ಅಂಗಣಗಳಲ್ಲಿ). ಆದರೆ, ಫೆಡರರ್‌ರ ಈ ಗೆಲುವು ಶ್ರೇಷ್ಠವೇ? ಅವರ ರೋಲಾಂಡ್‌ ಗ್ಯಾರೋಸ್‌ ಗೆಲುವು ಶ್ರೇಷ್ಠ ಸನ್ನಿವೇಶದಲ್ಲಿ ದಾಖಲಾಯಿತೇ? ನಡಾಲ್‌ಗಾದ ನಷ್ಟದಿಂದ ಇವರಿಗೆ ಲಾಭವಾಯಿತೇ?
ಸತತ 5ನೇ ವರ್ಷ ಫ್ರೆಂಚ್‌ ಓಪನ್‌ ಕಿರೀಟದ ಮೇಲೆ ಕಣ್ಣಿರಿಸಿದ್ದ ಸ್ಪೇನ್‌ನ ವಿಶ್ವ ನಂ.1 ಆಟಗಾರ ರಾಫೆಲ್‌ ನಡಾಲ್‌ ಪ್ರೀ-ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸ್ವೀಡನ್‌ನ ರಾಬಿನ್‌ ಸೋಡರ್ಲಿಂಗ್‌ ವಿರುದ್ಧ ಮುಗ್ಗರಿಸಿದರು. ಫ್ರೆಂಚ್‌ ಮಣ್ಣಿನಲ್ಲಿ ಇದು ನಡಾಲ್‌ ಅನುಭವಿಸಿದ ಮೊಟ್ಟ ಮೊದಲ ಸೋಲು. ಒಂದು ವೇಳೆ ನಡಾಲ್‌ ಈ ಬಾರಿಯೂ ಫೈನಲ್‌ ಪ್ರವೇಶಿಸಿದ್ದರೆ, ಫೆಡರರ್‌ ಪ್ರಶಸ್ತಿ ಗೆಲ್ಲುತ್ತಿದ್ದರೇ ಅಥವಾ ಆಸ್ಟ್ರೇಲಿಯನ್‌ ಓಪನ್‌ನಲ್ಲಾದಂತೆ ಕಣ್ಣೀರು ಹಾಕುತ್ತಿದ್ದರೇ ಎನ್ನುವುದು ಸಹಜ ಪ್ರಶ್ನೆಯಾದರೂ, ಅಪ್ರಸ್ತುತವೆನ್ನೋಣ. ಒಟ್ಟಿನಲ್ಲಿ ಫೆಡರರ್‌, ತಮ್ಮ ಹಾದಿಯನ್ನು ಸುಗಮಗೊಳಿಸಿದ ಸೋಡರ್ಲಿಂಗ್‌ಗೆ ಧನ್ಯವಾದ ಅರ್ಪಿಸಬೇಕು ಎನ್ನುವುದಂತೂ ನಿಜ.
ಹಾಗೆಂದು ಈ ವರ್ಷ ಫೆಡರರ್‌ ಹಾದಿ ಹೂವಿನ ಹಾಸಿಗೆಯೇನೂ ಆಗಿರಲಿಲ್ಲ. 2ನೇ ಸುತ್ತಿನಲ್ಲಿ ಜೋಸ್‌ ಅಕಾಸುಸೊ ವಿರುದ್ಧ, 4ನೇ ಸುತ್ತಿನಲ್ಲಿ ಜರ್ಮನಿಯ ಟಾಮ್ಮಿ ಹಾಸ್‌ ವಿರುದ್ಧ ಹಾಗೂ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾದ ಜುವಾನ್‌ ಮಾರ್ಟಿನ್‌ ಡೆಲ್‌ಪೊಟ್ರೊ ವಿರುದ್ಧ ಸೋಲಿನ ಮನೆಯ ದರ್ಶನ ಮಾಡಿ ಬಂದಿದ್ದರು. ಆದರೆ, ಈ ಎಲ್ಲಾ ಹೋರಾಟಗಳು ಅವರನ್ನು ಮಾನಸಿಕವಾಗಿ ಇನ್ನಷ್ಟು ಗಟ್ಟಿಗೊಳಿಸಿದವು. ಫೈನಲ್‌ ಪಂದ್ಯಕ್ಕೆ ಆಗಮಿಸುವ ಹೊತ್ತಿಗೆ ಅವರು ಚಾಂಪಿಯನ್‌ ಪಟ್ಟಕ್ಕೇರಲು ಸಂಪೂರ್ಣವಾಗಿ ಸನ್ನದ್ಧರಾಗಿದ್ದರು. ಫೈನಲ್‌ನಲ್ಲಿ ಅವರ ಎದುರಾಳಿಯಾಗಿದ್ದ ರಾಬಿನ್‌ ಸೋಡರ್ಲಿಂಗ್‌ ಅದಕ್ಕೆ ಮುನ್ನ ಡೇವಿಡ್‌ ಫೆರರ್‌, ರಾಫೆಲ್‌ ನಡಾಲ್‌, ನಿಕೊಲಾಯ್‌ ಡೇವಿಡೆಂಕೋ ಹಾಗೂ ಫನಾರ್ಂಡೊ ಗೊಂಜಾಲೆಜ್‌ರಂಥ ಕ್ಲೇಕೋರ್ಟ್‌ ತಜ್ಞರನ್ನು ಸೋಲಿಸಿದ್ದರು. ಆದರೂ, ಪ್ರಶಸ್ತಿ ಸಮರದಲ್ಲಿ ಫೆಡರರ್‌ ಅಧಿಕಾರ ಮೆರೆದರು. ಏಕಪಕ್ಷೀಯವಾಗಿ ಪಂದ್ಯ ಗೆದ್ದುಕೊಂಡರು.
ರೋಜರ್‌ ಫೆಡರರ್‌ ಇನ್ನೂ ಸ್ವಿಟ್ಜರ್ಲೆಂಡ್‌ ಪ್ರತಿನಿಧಿಸಿ ಡೇವಿಸ್‌ ಕಪ್‌ ಗೆದ್ದಿಲ್ಲ (ಬಹುಶಃ ಅವರ ಮುಂದಿನ ಗುರಿ ಅದಾಗಬಹುದು) ಹಾಗೂ ಒಲಿಂಪಿಕ್ಸ್‌ನಲ್ಲಿ ಸಿಂಗಲ್ಸ್‌ ಸ್ವರ್ಣ ಗೆದ್ದಿಲ್ಲ. ಬಹುಶಃ ಇದೆರಡು ಸಾಧನೆ ಒಲಿದರೆ ಅವರ ಶ್ರೇಷ್ಠತೆ ಪರಿಪೂರ್ಣವೆನಿಸಬಹುದು.
ವೃತ್ತಿಪರ ಟೆನಿಸ್‌ನಲ್ಲಿ ಫೆಡರರ್‌ಗೆ ಒಲಿಯದ ದಾಖಲೆಗಳಿಲ್ಲ. ಅವರು ಸತತ 237 ವಾರ ಕಾಲ ವಿಶ್ವ ನಂ.1 ಆಟಗಾರರಾಗಿದ್ದುದು ವಿಶ್ವದಾಖಲೆ. 14 ಗ್ರಾಂಡ್‌ಸ್ಲಾಂ ಗೆಲ್ಲುವ ಮೂಲಕ ಸಾಂಪ್ರಾಸ್‌ರ ಸಾರ್ವಕಾಲಿಕ ಗರಿಷ್ಠ ದಾಖಲೆ ಸರಿಗಟ್ಟಿದ್ದಾರೆ. ಒಟ್ಟು 19 ಬಾರಿ ಗ್ರಾಂಡ್‌ಸ್ಲಾಂ ಫೈನಲ್‌ ಪ್ರವೇಶಿಸುವ ಮೂಲಕ ಇವಾನ್‌ ಲೆಂಡ್ಲ್‌ ಹೆಸರಲ್ಲಿರುವ ದಾಖಲೆ ಸರಿಗಟ್ಟಿದ್ದಾರೆ. ಸತತ 20 ಗ್ರಾಂಡ್‌ಸ್ಲಾಂ ಟೂರ್ನಿಗಳಲ್ಲಿ ಕನಿಷ್ಠ ಸೆಮಿಫೈನಲ್‌ ಸಾಧನೆ ಮಾಡಿರುವುದು ಇನ್ನೊಂದು ವಿಶ್ವದಾಖಲೆ.
ಟೆನಿಸ್‌ನಲ್ಲಿ ಇಷ್ಟೆಲ್ಲಾ ಎತ್ತರಕ್ಕೇರಿರುವ ಫೆಡರರ್‌ ಅವರ ಮೊದಲ ಪ್ರೀತಿ ಫುಟ್‌ಬಾಲ್‌ ಎಂದರೆ ಆಶ್ಚರ್ಯವಾದೀತು. ಅವರು ಬಾಲ್ಯದಲ್ಲಿ ಕೆಲವು ಕಾಲ ಫುಟ್‌ಬಾಲ್‌ ಆಡಿದ್ದರು. ಜೊತೆಗೆ ಕ್ರಿಕೆಟ್‌ ಸಹ ಅವರಿಗಿಷ್ಟ. ಸುನಾಮಿಯಿಂದ ಸಂತ್ರಸ್ತರಾದ ಮಕ್ಕಳ ಜೊತೆ ಫೆಡರರ್‌ ತಮಿಳುನಾಡಿನಲ್ಲಿ ಕ್ರಿಕೆಟ್‌ ಆಡಿದ್ದು ಇತಿಹಾಸ.
ಎಲ್ಲಾ ಆದರ್ಶ ಪತಿಗಳಂತೆ ಫೆಡರರ್‌ ಸಹ ತಮ್ಮೆಲ್ಲಾ ಯಶಸ್ಸಿನಲ್ಲಿ ಪತ್ನಿ ಮಿರ್ಕಾ ಕೊಡುಗೆ ದೊಡ್ಡದು ಎಂದು ಫ್ರೆಂಚ್‌ ಓಪನ್‌ಗೆ ಮುನ್ನ ಹೇಳಿಕೊಂಡಿದ್ದರು. ಅದು ನಿಜವೂ ಇರಬಹುದು. ಏಕೆಂದರೆ, ಅವರು ನಿಜವಾದ ಅರ್ಥದಲ್ಲಿ `ಫ್ರೆಂಚ್‌ ಕಿಸ್‌' ನೀಡಿದ್ದು ಮದುವೆ ಆದ ಮೇಲೆಯೇ!


ವೃತ್ತಿಜೀವನದ ಉತ್ತುಂಗದಲ್ಲಿರುವಾಗ ಎಷ್ಟು ಉತ್ತಮವಾಗಿ ಆಡುತ್ತಾರೆ ಎನ್ನುವುದಕ್ಕಿಂತ, ಕಠಿಣ ಕಾಲಘಟ್ಟದಲ್ಲಿರುವಾಗಲೂ ಎಷ್ಟು ಉತ್ತಮವಾಗಿ ಆಡುತ್ತಾರೆ ಎನ್ನುವುದು ಆಟಗಾರನ ಶ್ರೇಷ್ಠತೆಯನ್ನು ಸೂಚಿಸುತ್ತದೆ
ಮಾರ್ಟಿನಾ ನವ್ರಾಟಿಲೋವ ಮಹಿಳಾ ಟೆನಿಸ್‌ ದಂತಕಥೆ

No comments:

Post a Comment