Tuesday, March 2, 2010

`ಭಾರತ ರತ್ನ' ಆಗುವರೇ ಭಾರತದ ರತ್ನ!



ಕನಸುಗಳು ಹೂವಿನಂತೆ
ಯೋಚನೆಗಳು ಹಾವಿನಂತೆ

ಕನಸು ಕಾಣುವ ಹಕ್ಕು ಹುಟ್ಟಿನಿಂದಲೇ ಎಲ್ಲರಿಗೂ ಸಿಕ್ಕಿರುತ್ತದೆ.
ಆದರೆ, ಕಂಡ ಕನಸೆಲ್ಲವೂ ನನಸಾಗುವುದು ಕಾಣುವವರ ಕೈಯಲ್ಲಿರುವುದಿಲ್ಲ.
ಮಕ್ಕಳು ತೆಂಡುಲ್ಕರ್‌, ದ್ರಾವಿಡ್‌ರಂತೆ ಆಗಲಿ ಎಂದು ಸಚಿನ್‌, ರಾಹುಲ್‌ ಎಂದು ಹೆಸರಿಟ್ಟಿರುತ್ತಾರೆ.
ಆದರೆ, ಭಾರತದಲ್ಲಿ ಸಚಿನ್‌ ಹೆಸರು ಹೊತ್ತ ಸಾವಿರಾರು ಮಕ್ಕಳು ಭವಿಷ್ಯದಲ್ಲಿ ತೆಂಡುಲ್ಕರ್‌ ಆಗುವುದಿಲ್ಲ. ಸಚಿನ್‌ ತೆಂಡುಲ್ಕರ್‌ ಯಾವತ್ತಿಗೂ ಒಬ್ಬರೇ.
ಹಾಗೆ ನೋಡಿದರೆ, ಯಾರೂ ಇನ್ನೊಬ್ಬರಂತೆ ಆಗಬೇಕಿಲ್ಲ. ನಾವು ನಾವೇ ಆಗಬೇಕು. ನಮ್ಮ ಸಾಧನೆಯಿಂದಲೇ ಸಮಾಜ ಗುರುತಿಸಬೇಕೇ ಹೊರತು ಇತರರ ಅನುಕರಣೆಯಿಂದಲ್ಲ.
ಇಂದು ಸಚಿನ್‌ ತೆಂಡುಲ್ಕರ್‌ ಎಂದರೆ, ಕೇವಲ ಅದೊಂದು ಹೆಸರಲ್ಲ, ಒಬ್ಬ ವ್ಯಕ್ತಿಯಲ್ಲ.
ಬದಲಿಗೆ ಸ್ಫೂರ್ತಿ, ಅಂತಃಶಕ್ತಿ, ಹೊಸ ಪೀಳಿಗೆಯ ಆಶೋತ್ತರಗಳಿಗೆ ದಾರಿದೀಪವಾಗಬಲ್ಲ ಜ್ಯೋತಿ. ಕ್ರಿಕೆಟ್‌ ಸಮಾಜದ ಕೀರ್ತಿ...
ತಗ್ಗು ಇರುವಲ್ಲಿ ನೀರು ಸಹಜವಾಗಿ ಹರಿಯುತ್ತದೆ.
ಸಚಿನ್‌ ಹಾಗೂ ದಾಖಲೆಗಳ ವಿಷಯವೂ ಹೀಗೆ.
ಸಚಿನ್‌ ಯಾವತ್ತಿದ್ದರೂ ಕ್ರಿಕೆಟ್‌ ಆಟವನ್ನು ಆನಂದಿಸಿದವರೇ ಹೊರತು ದಾಖಲೆಗಳಿಗಾಗಿ ಆಡಿದವರಲ್ಲ.
ಬದಲಿಗೆ ಅವರು ಕ್ರಿಕೆಟ್‌ ಆಡುತ್ತ ಆಡುತ್ತ ಸಾಗಿದಂತೆ ದಾಖಲೆಗಳೇ ಅವರನ್ನು ಹಿಂಬಾಲಿಸಿ ಬಂದಿವೆ.
ಏಕದಿನ ಪಂದ್ಯಗಳಲ್ಲಿ ದ್ವಿಶತಕ ಸಹ ಅಂಥ ಒಂದು ಸಾಧನೆ.
ಗರಿಷ್ಠ ಶತಕಗಳಿರಬಹುದು (ಏಕದಿನ- ಟೆಸ್ಟ್‌), ಗರಿಷ್ಠ ರನ್‌ ಗಳಿಕೆ ಇರಬಹುದು (ಏಕದಿನ- ಟೆಸ್ಟ್‌ಗಳಲ್ಲಿ), ಗರಿಷ್ಠ ಪಂದ್ಯಗಳು ಅಥವಾ ಇಂಥ ಇನ್ನೂ ಹತ್ತಾರು, ನೂರಾರು ದಾಖಲೆಗಳಿರಬಹುದು.... ಅವೆಲ್ಲಾ ಸಹಜವಾಗಿ ಸಚಿನ್‌ರನ್ನು ಅಲಂಕರಿಸಿವೆ. ಈ ಎಲ್ಲಾ ದಾಖಲೆಗಳು ಸಚಿನ್‌ ತೆಂಡುಲ್ಕರ್‌ ಎಂಬ ಅನುಪಮ ಆಟಗಾರನ ದೀರ್ಘ ಕಾಲದ ಬಾಳಿಕೆಯ ಸಂಕೇತ.
`ನಾವು ಹದಿನೈದು ವರ್ಷ ನಿರಂತರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಲು ಸಾಧ್ಯವಾದರೆ, ದಾಖಲೆಗಳು ಸಹಜವಾಗಿ ಒಲಿಯುತ್ತವೆ. ದಾಖಲೆ ನಿರ್ಮಿಸುವುದರಲ್ಲಿ ಹೆಚ್ಚುಗಾರಿಕೆಯೇನಿಲ್ಲ. ನಿರಂತರವಾಗಿ ಅಷ್ಟು ಕಾಲ ಉನ್ನತ ಮಟ್ಟದ ಕ್ರಿಕೆಟ್‌ ಆಡುವುದೇ ದೊಡ್ಡದು' ಎಂದು ಟೆಸ್ಟ್‌ ಹಾಗೂ ಏಕದಿನ ಮಾದರಿಯಲ್ಲಿ 10 ಸಾವಿರ ರನ್‌ ಗಡಿ ದಾಟಿದ ಸಂದರ್ಭದಲ್ಲಿ ರಾಹುಲ್‌ ದ್ರಾವಿಡ್‌ ಹೇಳಿಕೊಂಡಿದ್ದರು. ಈ ಮಾತು ಅಕ್ಷರಶಃ ನಿಜ.
ಸಚಿನ್‌ 1989ರಿಂದ ನಿರಂತರವಾಗಿ ಕ್ರಿಕೆಟ್‌ ಆಡುತ್ತಿದ್ದಾರೆ. ಅವರ ಆಟಕ್ಕೆ ಆಗಾಗ ಗಾಯಗಳು ಮಾತ್ರ ತಡೆಯೊಡ್ಡಿವೆ. ಅಥವಾ ಸ್ವತಃ ವಿಶ್ರಾಂತಿ ಬಯಸಿ ಕೆಲವೊಂದು ಸರಣಿಗಳಿಂದ ಹಿಂದೆ ಸರಿದಿದ್ದಿದೆ. ಆದರೆ, ಫಿಟ್‌ ಆಗಿ ತಂಡದಲ್ಲಿರುವ ಸಂದರ್ಭದಲ್ಲಿ ದೈಹಿಕವಾಗಿ, ಮಾನಸಿಕವಾಗಿ ಅವರ ಬದ್ಧತೆ ಪ್ರಶ್ನಾತೀತ. ಮೈದಾನದಲ್ಲಿರುವಾಗ ದಣಿವು ಅವರನ್ನು ಬಾಧಿಸುವುದಿಲ್ಲ. ಅವರನ್ನು ಕಾಡುವುದೇನಾದರೂ ಇದ್ದರೆ ಅದು ರನ್‌ ಹಸಿವು ಮಾತ್ರ. ಲೆಕ್ಕವಿಲ್ಲದಷ್ಟು ದೊಡ್ಡ ದೊಡ್ಡ ಇನಿಂಗ್ಸ್‌ಗಳನ್ನು ಆಡಿರುವ ಅವರು ಅಂಥ ಸಂದರ್ಭಗಳಲ್ಲಿ ರನ್ನರ್‌ ನೆರವು ಪಡೆದಿರುವಂಥ ನಿದರ್ಶನಗಳು ಬಹಳ ವಿರಳ. ಎಷ್ಟೋ ಬಾರಿ ರನ್ನರ್‌ ಸೌಲಭ್ಯವನ್ನು ಅವರು ನಿರಾಕರಿಸಿದ್ದಿದೆ. ಅವರ ಸಾಧನೆ ಅಷ್ಟರ ಮಟ್ಟಿಗೆ ಪರಿಪೂರ್ಣ; ಸ್ವ-ಪರಿಶ್ರಮದಿಂದಲೇ ಮೂಡಿಬಂದಿರುವಂಥದ್ದು.
ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿ-ಶತಕ ಸಾಧನೆ ಇನ್ನೂ ಸಚಿನ್‌ ಬ್ಯಾಟ್‌ನಿಂದ ಸಿಡಿದಿಲ್ಲ. ಆದರೆ, ಸದ್ಯದ ಅವರ ಲಹರಿಯನ್ನು ಗಮನಿಸಿದರೆ, ಈ ವರ್ಷವೇ ಅಂಥ ಒಂದು ಸಾಧನೆ ಮೂಡಿಬಂದರೂ ಅಚ್ಚರಿಯೇನಿಲ್ಲ. ಸಚಿನ್‌ ಬಳಿ ದೊಡ್ಡ ಇನಿಂಗ್ಸ್‌ ಆಡುವುದಕ್ಕೆ ಅಗತ್ಯವಾದ ಸ್ಥಿರತೆ, ತಾಂತ್ರಿಕತೆ, ಸಹನಶೀಲತೆ, ದೈಹಿಕ ತ್ರಾಣ ಎಲ್ಲವೂ ಇದೆ. ಬಹುಶಃ ಅವರು ತ್ರಿ-ಶತಕಕ್ಕಾಗಿಯೇ ಆಡಿದ್ದರೆ, ಈವರೆಗಿನ ಐದು ದ್ವಿಶತಕಗಳಲ್ಲಿ ಯಾವುದೋ ಒಂದು 300ರ ಗಡಿ ದಾಟುವ ಸಾಧ್ಯತೆಯೂ ಇತ್ತು. ಆದರೆ, ಅವರೆಂದೂ ವೈಯಕ್ತಿಕ ಮೈಲಿಗಲ್ಲುಗಳಿಗಾಗಿ ಆಡುವವರಲ್ಲ.
ವೀರೇಂದ್ರ ಸೆಹ್ವಾಗ್‌ ಟೆಸ್ಟ್‌ ಪಂದ್ಯಗಳಲ್ಲಿ 2 ಬಾರಿ 300ರ ಗಡಿ ದಾಟಿದ್ದಾರೆ. 3ನೇ ಬಾರಿ ಹತ್ತಿರ ಬಂದಿದ್ದಾರೆ. ಏಕದಿನಗಳಲ್ಲೂ ದ್ವಿಶತಕದ ಸಾಧನೆ ಮೂಡುವುದಿದ್ದರೆ, ಅದು ಸೆಹ್ವಾಗ್‌ರಿಂದ ಸಾಧ್ಯ ಎಂಬ ನಂಬಿಕೆಯಿತ್ತು. ಆದರೆ, ಟೆಸ್ಟ್‌ ಪಂದ್ಯಗಳಲ್ಲಿ ಪ್ರದರ್ಶಿಸುವ ತಪಸ್ಸಿನಂಥ ತನ್ಮಯತೆಯ ಆಟ ಏಕದಿನಗಳಲ್ಲಿ ಅವರಿಂದ ಸಾಧ್ಯವಾಗಿಲ್ಲ. ಆದರೆ, ಸಚಿನ್‌ ಯಾವುದೇ ಮಾದರಿಗಳ ಭೇದವಿಲ್ಲದೆ ಆಡುವವರು. ಅವರು ಆಡುವಾಗ ಎದುರಾಳಿಗಳು, ಪಿಚ್‌ ಇವೆಲ್ಲವೂ ಗೌಣ. ಎಸೆತಗಳ ಯೋಗ್ಯತೆಗೆ ತಕ್ಕಂತೆ ಅವರ ಬ್ಯಾಟ್‌ನಿಂದ ಉಪಚಾರ ಸಿಗುತ್ತದೆ.
ಗ್ವಾಲಿಯರ್‌ನಲ್ಲೂ ಅಷ್ಟೇ. ಅಂದು ಸಚಿನ್‌ ಆಡಿದ್ದು ಅದೆಂಥಾ ಮೋಹಕ ಆಟ! ಕೆಲವು ತಿಂಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧ 350 ರನ್‌ ಗುರಿ ಬೆನ್ನಟ್ಟಿದ ಸಂದರ್ಭದಲ್ಲಿ 175 ರನ್‌ ಬಾರಿಸಿದ್ದು ಸಚಿನ್‌ರ ಶ್ರೇಷ್ಠ ಇನಿಂಗ್ಸ್‌ ಎಂದು ವಿಶ್ಲೇಷಕರು ಹೇಳಬಹುದು. ಆದರೆ, ಗ್ವಾಲಿಯರ್‌ನಲ್ಲಿ ಭಾರತೀಯರು ಮೊದಲ ಸರದಿಯಲ್ಲಿ ಬ್ಯಾಟಿಂಗ್‌ ಮಾಡಿದ್ದರು ಎಂಬ ಅಂಶ ಬಿಟ್ಟರೆ, ವಿಶ್ವದ ನಂ.1 ವೇಗಿ ಡೇಲ್‌ ಸ್ಟೈನ್‌ರನ್ನೊಳಗೊಂಡ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್‌ ಆಟ ಉತ್ಕೃಷ್ಟ ಗುಣಮಟ್ಟದ್ದಾಗಿತ್ತು. ಜೀವದಾನಗಳ ನೆರವಿಲ್ಲದ ನಿಷ್ಕಳಂಕ ಆಟವಾಗಿತ್ತು.
ಹಾಗೆ ನೋಡಿದರೆ, ಏಕದಿನ ಮಾದರಿಗಿಂತ ಟೆಸ್ಟ್‌ಗಳಲ್ಲಿ ದ್ವಿಶತಕ ಬಾರಿಸುವುದು ಸುಲಭ. ಏಕೆಂದರೆ, ಅಲ್ಲಿ ಬ್ಯಾಟ್ಸ್‌ಮನ್‌ ನೆತ್ತಿಯ ಮೇಲೆ ಸಮಯದ ಕತ್ತಿ ತೂಗುತ್ತಿರುವುದಿಲ್ಲ. ಏನೇ ಸಾಹಸವಿದ್ದರೂ, 50 ಓವರ್‌ಗಳಲ್ಲೇ ಮುಗಿಸಬೇಕು ಎಂಬ ಪರಿಮಿತಿ ಇರುವುದಿಲ್ಲ. ಉಸಿರು ತೆಗೆದುಕೊಳ್ಳಲು ವ್ಯವಧಾನವಿಲ್ಲದಂತೆ ಬಿಡುವಿಲ್ಲದೆ ಆಬೇಕಾದ ಅನಿವಾರ್ಯವಿರುವುದಿಲ್ಲ. ಟೆಸ್ಟ್‌ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳು ತಮ್ಮದೇ ವೈಯಕ್ತಿಕ ರನ್‌ಗಳಿಗಾಗಿ ಎಷ್ಟು ಹೊತ್ತು ಬೇಕಾದರೂ ಆಡಿಕೊಳ್ಳಬಹುದು. ನಿರಂತರವಾಗಿ 5-6 ಓವರ್‌ಗಳಲ್ಲಿ ರನ್‌ ಗಳಿಸದೆ ಇದ್ದರೂ ಅದರಿಂದ ಅಂಥ ಸಮಸ್ಯೆಯೇನೂ ಎದುರಾಗುವುದಿಲ್ಲ. ಜೊತೆಯಲ್ಲಿರುವ ಇನ್ನೊಬ್ಬ ಬ್ಯಾಟ್ಸ್‌ಮನ್‌ ಸಲುವಾಗಿ ಚುರುಕು ಒಂಟಿ ರನ್‌ಗಳನ್ನು ಓಡಿ ಸುಸ್ತು ಹೊಡೆಯುವ ಪ್ರಮೇಯವೂ ಇರುವುದಿಲ್ಲ. ಜೊತೆಗೆ ಪಾನೀಯ, ಭೋಜನ, ಚಹಾ ವಿರಾಮದಂಥ ಬಿಡುವುಗಳು ಆಟಗಾರನಿಗೆ ಚೈತನ್ಯ ಮರಳಿ ಪಡೆದುಕೊಳ್ಳಲು ನೆರವಾಗುತ್ತವೆ. ಈ ಎಲ್ಲಾ ದೃಷ್ಟಿಕೋನದಿಂದ ನೋಡುವಾಗ ಟೆಸ್ಟ್‌ ಮಾದರಿಯಲ್ಲಿ ದ್ವಿಶತಕ ಬಾರಿಸುವುದಕ್ಕೂ, ಏಕದಿನ ಮಾದರಿಯಲ್ಲಿ ದ್ವಿಶತಕ ಬಾರಿಸುವುದಕ್ಕೂ ಅಗಾಧ ವ್ಯತ್ಯಾಸವಿದೆ. ಹಾಗೆಂದೇ, ಟೆಸ್ಟ್‌ಗಳಲ್ಲಿ ಲೆಕ್ಕವಿಲ್ಲದಷ್ಟು ಆಟಗಾರರು 200 ರನ್‌ ಗಡಿ ದಾಟಿದ್ದಾರೆ. ಏಕದಿನಗಳಲ್ಲಿ ಮಾತ್ರ ಸಚಿನ್‌ ಒಬ್ಬರೇ.
ಸಚಿನ್‌ ಭಾರತವನ್ನು ಪ್ರತಿನಿಧಿಸುವ ಓರ್ವ ಕ್ರೀಡಾಪಟು ಮಾತ್ರವೇ ಅಲ್ಲ. ಅವರೊಬ್ಬ ಆದರ್ಶ ಪುರುಷ. ಕ್ರಿಕೆಟ್‌ನ ನಿಜವಾದ ಜೆಂಟಲ್‌ಮ್ಯಾನ್‌. ನಿಜ ಅರ್ಥದಲ್ಲಿ ಕ್ರೀಡೆಯ ರಾಯಭಾರಿ.
ಅವರ ಒಂದೊಂದು ರನ್‌ಗಳು ದೇಶದ ಮುಖವನ್ನು ಅರಳಿಸುತ್ತವೆ. ಅವರ ಹೊಸ ಹೊಸ ದಾಖಲೆಗಳು, ಶತಕಗಳು, ಭಾರತೀಯರು ಸಂಭ್ರಮಿಸುವುದಕ್ಕೆ ಕಾರಣ ಕಟ್ಟಿಕೊಡುತ್ತವೆ. ಹೊಸ ಪೀಳಿಗೆ ಡಾನ್‌ ಬ್ರಾಡ್ಮನ್‌ ಆಟವನ್ನು ನೋಡಿಲ್ಲ. ಕೇವಲ ಟೆಸ್ಟ್‌ ಕ್ರಿಕೆಟ್‌ ಮಾತ್ರ ಆಡಿರುವ, ಬಹುಪಾಲು ಇಂಗ್ಲೆಂಡ್‌ ವಿರುದ್ಧ ಮಾತ್ರ ಆಡಿರುವ ಬ್ರಾಡ್ಮನ್‌ 59 ಟೆಸ್ಟ್‌ಗಳಲ್ಲಿ 29 ಶತಕ ಬಾರಿಸಿರುವ ಕಾರಣಕ್ಕೆ, 99.99 ಸರಾಸರಿ ಹೊಂದಿರುವ ಕಾರಣಕ್ಕೆ ಅವರನ್ನು ಸರ್ವಶ್ರೇಷ್ಠ ಎಂದು ಹೊಗಳುತ್ತಿದ್ದೇವೆ. ಆದರೆ, ಕಣ್ಣಿಗೆ ಕಾಣದ ದೇವರನ್ನು ಮೆಚ್ಚಿಕೊಳ್ಳುವುದಕ್ಕಿಂತ, ಕಣ್ಣೆದುರಿಗೇ ಇರುವ ದೇವರನ್ನು ಆರಾಧಿಸುವುದರಲ್ಲಿ ಅರ್ಥವಿದೆ.
ಬ್ರಾಡ್ಮನ್‌ ಕಾಲದಲ್ಲಿ ಈಗಿನಂತೆ ಹೆಲ್ಮೆಟ್‌ ಇರಲಿಲ್ಲ, ಇತರ ರಕ್ಷಣಾಸಾಧನಗಳು ಇರಲಿಲ್ಲ. ಭಯಾನಕ ವೇಗಿಗಳು, ಭಯಾನಕ ಪಿಚ್‌ಗಳಲ್ಲಿ ಆಡುತ್ತಿದ್ದರು ಎಲ್ಲವೂ ಸರಿ. ಆದರೆ, ತಂತ್ರಜ್ಞಾನ ಬೆಳೆದಂತೆ, ಸವಾಲುಗಳ ಸ್ವರೂಪವೂ ಬದಲಾಗಿದೆ. ಹಿಂದೆಲ್ಲಾ ವರ್ಷದಲ್ಲಿ ಹೆಚ್ಚೆಂದರೆ, ಮೂರ್ನಾಲ್ಕು ತಿಂಗಳು ಕ್ರಿಕೆಟ್‌ ಆಡುತ್ತಿದ್ದರು. ಈಗ ವರ್ಷದಲ್ಲಿ ಮೂರು ತಿಂಗಳ ವಿಶ್ರಾಂತಿಯೂ ಸಿಗುವುದಿಲ್ಲ. ವರ್ಷಂಪೂರ್ತಿ ವಿಶ್ವಪರ್ಯಟನೆ, ವಿಶ್ವದ ವಿವಿಧ ದೇಶ, ಹವಾಮಾನ, ಪಿಚ್‌ಗಳಲ್ಲಿ ಆಡುವ ಸವಾಲು ಸುಲಭದ್ದೇನಲ್ಲ. ತಂತ್ರಜ್ಞಾನಗಳ ಬಳಕೆ ಹೆಚ್ಚಾದಷ್ಟೂ ಬ್ಯಾಟಿಂಗ್‌ ಮಾಡುವುದು ಕಠಿಣವಾಗಿದೆ. ಬ್ಯಾಟ್ಸ್‌ಮನ್‌ ಮಾಡುವ ಸಣ್ಣ ಪ್ರಮಾದಗಳೂ ಟಿವಿ ಕ್ಯಾಮೆರಾಗಳಲ್ಲಿ ದಾಖಲಾಗುವುದರಿಂದ ತಂತ್ರಜ್ಞಾನದ ಹದ್ದಿನ ಕಣ್ಣುಗಳಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂಬಂತಾಗಿದೆ. ಹಿಂದೆಲ್ಲಾ ಹೀಗಿರಲಿಲ್ಲ. ಹಾಗಾಗಿ ವರ್ತಮಾನದಲ್ಲಿ ಬ್ಯಾಟ್ಸ್‌ಮನ್‌ಗಳು ಔಟಾಗುವ ಸಾಧ್ಯತೆ ಮೊದಲಿಗಿಂತ ದುಪ್ಪಟ್ಟು ಜಾಸ್ತಿಯಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಅತ್ಯುತ್ತಮರು ಮಾತ್ರ ಬಚಾವಾಗುವ ಸನ್ನಿವೇಶದಲ್ಲಿ, ನಿರಂತರವಾಗಿ, ಸ್ಥಿರವಾಗಿ ಕ್ರಿಕೆಟ್‌ ಆಡುವುದು ಕಷ್ಟದ ಕೆಲಸ. ಇಂಥ ಎಲ್ಲಾ ಸವಾಲುಗಳ ನಡುವೆಯೂ ಸಚಿನ್‌ ಅದ್ವಿತೀಯರಾಗಿ ಎತ್ತರಕ್ಕೆ ಬೆಳೆದು ನಿಂತಿರುವುದು ಅವರಿಗೆ ಸಾರ್ವಕಾಲಿಕ ಪಟ್ಟ ಕಟ್ಟಲು ಕಾರಣ.
ಸಚಿನ್‌ ಕ್ರಿಕೆಟ್‌ನಲ್ಲಿ ಅಷ್ಟೇ ಏಕೆ ಕ್ರೀಡಾ ಕ್ಷೇತ್ರದಲ್ಲೇ ಭಾರತದ ರತ್ನ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂಥ ಅನರ್ಘ್ಯ ರತ್ನಕ್ಕೆ ಭಾರತ ಸರ್ಕಾರದ ಸರ್ವೋಚ್ಚ ನಾಗರಿಕ ಪುರಸ್ಕಾರ `ಭಾರತ ರತ್ನ' ದೊರೆಯಬಹುದೇ? ಸಚಿನ್‌ ಅದಕ್ಕೆ ಅರ್ಹರು ಎಂಬ ವಿಷಯದಲ್ಲಿ ಯಾರೂ ಆಕ್ಷೇಪವೆತ್ತುವುದಿಲ್ಲ. ಈಗಾಗಲೇ ಕಪಿಲ್‌ ದೇವ್‌, ವಾಡೇಕರ್‌ರಂಥ ದಿಗ್ಗಜರು ಲಿಟ್ಲ್‌ ಮಾಸ್ಟರ್‌ಗೆ ಭಾರತ ರತ್ನ ಸಿಗಲಿ ಎಂದಿದ್ದಾರೆ. ಮಹಾರಾಷ್ಟ್ರ ಸರ್ಕಾರ ಈಗಾಗಲೇ ಸಚಿನ್‌ ಹೆಸರನ್ನು ಈ ಪುರಸ್ಕಾರಕ್ಕಾಗಿ ಶಿಫಾರಸು ಮಾಡಿದೆ. ಬಹುಶಃ ದೇಶದ ಅತ್ಯಂತ ಕಿರಿಯ ವಯಸ್ಸಿನ `ಭಾರತ ರತ್ನ' ಎಂಬ ಹೆಗ್ಗಳಿಕೆಗೆ ತೆಂಡುಲ್ಕರ್‌ ಪಾತ್ರರಾಗುವ ದಿನ ದೂರವಿಲ್ಲ.
ಆ ದಿನ ಇಡೀ ಭಾರತಕ್ಕೆ ಭಾರತವೇ ಸಂಭ್ರಮಿಸಲಿದೆ.

2 comments:

  1. ರಾಘವೇಂದ್ರ,
    ನೀವು ಬ್ಲಾಗ್ ಆರಂಭಿಸಿ ಸುಮಾರು ಒಂದು ವರ್ಷವಾಗುತ್ತಾ ಬಂದರೂ, ಇವತ್ತು ನಿಮ್ಮ ಬ್ಲಾಗ್ ನನಗೆ ಸಿಕ್ತು ಎನ್ನುವುದೇ ನನಗೆ ಬೇಸರದ ವಿಷಯ. ಆದರೂ ಸಿಕ್ಕಿತಲ್ಲ ಎನ್ನುವುದು ಸಂತೋಷದ ವಿಷಯ. ಕ್ರೀಡೆಗಳ ಬಗ್ಗೆ ಅದ್ಭುತವಾಗಿ ಬರೆದಿದ್ದೀರಿ. ಕ್ರಿಕೆಟ್ ಬಗ್ಗೆ ಬರೆದ ಎಲ್ಲಾ ಲೇಖನಗಳನ್ನು ಈಗಷ್ಟೇ ಓದಿ ಮುಗಿಸಿಬಿಟ್ಟೆ. ಪತ್ರಕರ್ತರಾಗಿದ್ದವರಿಗೆ ಕ್ರೀಡೆಯ ಬಗ್ಗೆ ಹೆಚ್ಚಿನ ಮಾಹಿತಿಗಳು, ಆಗುಹೋಗುಗಳ ಬಗ್ಗೆ ಹೆಚ್ಚಿನ ಅರಿವು ಮತ್ತು ಒಳಸುದ್ದಿಗಳು ಲಭ್ಯವಾಗುತ್ತಾ ಇದ್ದರೂ ಯಾರೂ ಅದನ್ನು ಬ್ಲಾಗ್ ರೂಪದಲ್ಲಿ ಯಾಕೆ ಬರೆಯುತ್ತಿಲ್ಲ ಎಂದು ಇಷ್ಟು ದಿನ ಅಂತಹ ಬ್ಲಾಗ್ ಹುಡುಕಾಡುತ್ತಿದ್ದೆ. ಹುಡುಕಾಟದ ಪ್ರತಿಫಲವಾಗಿ ಇಂದು ಸಿಕ್ಕಿತು ’ರಾಗಾಕ್ಷರ’. ತುಂಬಾನೇ ಸಂತೋಷವಾಯಿತು. ಧನ್ಯವಾದಗಳು.

    ReplyDelete
  2. ಪ್ರೀತಿಯ ರಾಜೇಶ್‌, ನಿಮ್ಮ ಅಭಿಮಾನಕ್ಕೆ ತುಂಬಾ ಧನ್ಯವಾದಗಳು. ನಾನು ಸಹ ಇತ್ತೀಚೆಗೆ ಆಕಸ್ಮಿಕವಾಗಿ ನಿಮ್ಮ ಬ್ಲಾಗ್‌ ನೋಡಿದೆ. ರಾಹುಲ್‌ ದ್ರಾವಿಡ್‌ ಶ್ರೇಷ್ಠತೆಯ ಸರಣಿ ಬಹಳ ಚೆನ್ನಾಗಿದೆ. ಅದರಲ್ಲಿರುವ ಹಲವು ವಿಷಯಗಳು ನನಗೂ ತಿಳಿದಿರಲಿಲ್ಲ.
    ಥ್ಯಾಂಕ್ಸ್‌

    ReplyDelete