
ಜೆ. ಅರುಣ್ ಕುಮಾರ್ ವಿದಾಯ
ಚಲನಶೀಲತೆ ಜಗತ್ತಿನ ಗುಣ. ಪರಿವರ್ತನೆ ಜಗದ ನಿಯಮ.
ನೀರು, ಗಾಳಿ, ಮನಸ್ಸಿನ ಲಹರಿ... ಯಾವುದೂ ಸ್ಥಿರವಾಗಿ ಒಂದೆಡೆ ನಿಲ್ಲುವುದಿಲ್ಲ.
ಬದುಕು ಸಹ.
ಕಾಲಕ್ಕೆ ತಕ್ಕಂತೆ ಬದುಕಬೇಕು, ಬದಲಾಗಬೇಕು.
ನಮ್ಮ ಸಮಯ ಬಂದಾಗ ನಿರ್ಗಮಿಸಬೇಕು.
ಆ ಸೂಕ್ತ ಸಮಯ ಯಾವುದೆನ್ನುವುದೂ ತಿಳಿದಿರ ಬೇಕು. ಅದೇ ಗೌರವ.
ಜಗದೀಶ್ ಅರುಣ್ ಕುಮಾರ್ ಕೂಡ ಬೇರೆ ಯವರು ಸಾಕೆನ್ನುವ, ಹೋಗೆನ್ನುವ ಮೊದಲೇ ಸ್ವಯಂ ನಿರ್ಧಾರ ತೆಗೆದುಕೊಂಡು ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿರ್ಗಮಿಸಿದ್ದಾರೆ.
ಸ್ನೇಹಿತರ ವಲಯದಲ್ಲಿ ಜಾಕ್ ಎಂದೇ ಹೆಸರಾಗಿ ರುವ (ಅದೇ ಹೆಸರಿನ ಕ್ರಿಕೆಟ್ ಅಕಾಡೆಮಿ ಯೊಂದನ್ನೂ ನಡೆಸುತ್ತಿದ್ದಾರೆ) ಅರುಣ್ ಕುಮಾರ್ ಹೊಡೆಬಡಿ ಬ್ಯಾಟ್ಸ್‌ಮನ್. ಕರ್ನಾಟಕ ಕ್ರಿಕೆಟ್ ಕಂಡ ಅತ್ಯುತ್ತಮ ಆರಂಭಿಕ ಆಟಗಾರರಲ್ಲೊಬ್ಬರು. ಸುಮಾರು ಒಂದು ದಶಕ ಕಾಲ ದೇಶಿ ಕ್ರಿಕೆಟ್‌ನಲ್ಲಿ ಸುಜಿತ್ ಸೋಮಸುಂದರ್ ಜೊತೆ ಕರ್ನಾಟಕ ತಂಡಕ್ಕೆ ಅತ್ಯುತ್ತಮ ಆರಂಭ ಕೊಡಿಸಿದವರು. ಅರುಣ್ ಮಾತಿನಲ್ಲೇ ಹೇಳುವುದಾದರೆ, 90ರ ದಶಕ ದಲ್ಲಿ ರಣಜಿ ಟ್ರೋಫಿಯಲ್ಲಿ ಸೆಮಿಫೈನಲ್ ಸಾಧನೆ ಮಾಡುವುದು ಕರ್ನಾಟಕ ತಂಡಕ್ಕೆ ಆಜನ್ಮ ಸಿದ್ಧ ಹಕ್ಕು ಎಂಬಂತಿತ್ತು. ಪ್ರತೀ ವರ್ಷ ಕನಿಷ್ಠ ಉಪಾಂತ್ಯ ಪ್ರವೇಶದ ಆತ್ಮವಿಶ್ವಾಸ ಆಟಗಾರರಲ್ಲಿರುತ್ತಿತ್ತು. ತಂಡದ ಇಂಥ ಯಶಸ್ಸಿನಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಆಗಿ ಅರುಣ್ ಕೊಡುಗೆ ದೊಡ್ಡದು.
90ರ ದಶಕವೆಂದರೆ, ಕರ್ನಾಟಕ ಕ್ರಿಕೆಟ್‌ನ ಸುವರ್ಣ ಯುಗ. ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್, ವೆಂಕಟೇಶ್ ಪ್ರಸಾದ್, ವಿಜಯ್ ಭಾರದ್ವಾಜ್, ದೊಡ್ಡ ಗಣೇಶ್, ಸುನಿಲ್ ಜೋಷಿ, ಡೇವಿಡ್ ಜಾನ್ಸನ್ ಮೊದಲಾದ ದಿಗ್ಗಜ ಆಟಗಾರರು ಪ್ರವರ್ಧಮಾನಕ್ಕೆ ಬಂದ ಕಾಲ ಅದು. ಆ ಎಲ್ಲಾ ಆಟಗಾರರೂ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದರು. ಕುಂಬ್ಳೆ, ಶ್ರೀನಾಥ್, ದ್ರಾವಿಡ್ ಮತ್ತು ವೆಂಕಿ ಭಾರತ ತಂಡದ ಖಾಯಂ ಆಟಗಾರರೆನಿಸಿದರೆ, ಉಳಿದವರು (ಸುಜಿತ್ ಸೋಮಸುಂದರ್ ಸೇರಿದಂತೆ) ಕೆಲವು ಪಂದ್ಯಗಳಲ್ಲಾದರೂ ರಾಷ್ಟ್ರವನ್ನು ಪ್ರತಿನಿಧಿಸಿದರು. ಆದರೆ, ಈ ವಿಷಯದಲ್ಲಿ ಅರುಣ್ ದುರದೃಷ್ಟವಂತ ರಾಗಿದ್ದರು. ದೇಶಿ ಕ್ರಿಕೆಟ್‌ನಲ್ಲಿ ಎದುರಾಳಿ ತಂಡಗಳ ಭಯ, ಗೌರವ ಸಂಪಾದಿಸಿದ್ದ ಅರುಣ್, ರಾಷ್ಟ್ರೀಯ ಆಯ್ಕೆಗಾರರ ಒಲವು ಸಂಪಾದಿಸಲು ಮಾತ್ರ ವಿಫಲರಾದರು.
19 ವಯೋಮಿತಿ ಭಾರತ ತಂಡ ಪ್ರತಿನಿಧಿಸಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿದ್ದ ಅರುಣ್, ಹಿರಿಯರ ತಂಡ ಆಯ್ಕೆಗೆ ಅತ್ಯಂತ ಸಮೀಪ ಸುಳಿದಿದ್ದು 1999-2000ದಲ್ಲಿ. ಆಗ ಭಾರತ `ಎ' ತಂಡದೊಂದಿಗೆ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಿದ್ದ ಅರುಣ್, ಗಯಾನ ವಿರುದ್ಧ ಶತಕ ಸೇರಿದಂತೆ ತಂಡದ ಪರ ಗರಿಷ್ಠ 566 ರನ್ ಕಲೆ ಹಾಕಿದ್ದರು. ಆದರೆ, ಆಗಲೂ ಅವರಿಗೆ ನಿರಾಸೆ ಕಾದಿತ್ತು. ಆಯ್ಕೆಗಾರರು ಮತ್ತೊಮ್ಮೆ ಕಡೆಗಣಿಸಿ ಮುಂಬೈನ ವಾಸಿಂ ಜಾಫರ್‌ಗೆ ಮಣೆ ಹಾಕಿದ್ದರು.
ಅರುಣ್ 12 ವರ್ಷದ ಬಾಲಕನಾಗಿದ್ದಾಗ ಬೃಜೇಶ್ ಪಟೇಲ್ ಕ್ರಿಕೆಟ್ ಕ್ಲಿನಿಕ್ (ಈಗ ಅಕಾಡೆಮಿ ಆಗಿದೆ) ತಂಡದ ಜೊತೆ ಪೂರ್ವ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದರು. ಆಗಲೇ ಇವರ ಪ್ರತಿಭೆಯನ್ನು ಬೃಜೇಶ್ ಪಟೇಲ್ ಪತ್ತೆ ಹಚ್ಚಿದ್ದರು.
ರಾಜ್ಯ ತಂಡದಲ್ಲಿ ಅಂತಾರಾಷ್ಟ್ರೀಯ ಖ್ಯಾತ ಆಟಗಾರರಿರುವಾಗಲೂ, ದೊಡ್ಡ ಸಾಧನೆಯ ಮೂಲಕ ತಮ್ಮ ಛಾಪು ಮೂಡಿಸಿದವರು ಅರುಣ್. ಕರ್ನಾಟಕದ ಇತ್ತೀಚಿನ ಮೂರು ರಣಜಿ ಟ್ರೋಫಿ ವಿಜಯದ (1995-96, 1997-98, 1998-99) ಸಂದರ್ಭಗಳಲ್ಲಿ ತಂಡದ ಸದಸ್ಯರಾಗಿದ್ದ ಅರುಣ್ 98-99ರ ಫೈನಲ್‌ನಲ್ಲಿ ಮಧ್ಯ ಪ್ರದೇಶದ ವಿರುದ್ಧ (147) ಹಾಗೂ 97-98ರ ಫೈನಲ್‌ನಲ್ಲಿ ಉತ್ತರ ಪ್ರದೇಶದ ವಿರುದ್ಧ (104) ಅಮೋಘ ಶತಕ ಬಾರಿಸಿ ತಾವು ದೊಡ್ಡ ಪಂದ್ಯಗಳ ಆಟಗಾರ ಎಂದು ನಿರೂ ಪಿಸಿದವರು. ರಾಹುಲ್ ದ್ರಾವಿಡ್ ದೇಶಿ ಪಂದ್ಯ ಗಳಲ್ಲಿ ಆಡಿದಾಗಲೆಲ್ಲಾ ದ್ವಿಶತಕ ಬಾರಿಸುತ್ತಿದ್ದ ಕಾಲ ಅದು. ವಿಜಯ್ ಭಾರದ್ವಾಜ್, ದೊಡ್ಡ ಗಣೇಶ್ ಮೊದಲಾದವರು ಫಾರ್ಮ್‌ನ ಉತ್ತುಂಗದಲ್ಲಿದ್ದ ಆ ಸಂದರ್ಭದಲ್ಲಿ ತಮ್ಮ ಉಪಸ್ಥಿತಿಯ ಮಹತ್ವವನ್ನು ಅರುಣ್ ಪ್ರತೀ ಬಾರಿ ನೆನಪಿಸುವಂತೆ ಆಡುತ್ತಿದ್ದರು.
ಕರ್ನಾಟಕ ತಂಡದ ನಾಯಕರಾಗಿಯೂ ಉತ್ತಮ ಸಾಧನೆಗೈದಿರುವ ಅರುಣ್, ಇತ್ತೀಚೆಗೆ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ನಾಯಕ / ಕೋಚ್ ಆಗಿ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದಾರೆ. ಕೆಪಿಎಲ್‌ನ ಅತ್ಯುತ್ತಮ ಆಟಗಾರ ಗೌರವಕ್ಕೂ ಅರುಣ್ ಪಾತ್ರರಾಗಿದ್ದಾರೆ.
ವೃತ್ತಿಜೀವನದ ಉಚ್ಛ್ರಾಯ ಫಾರ್ಮ್‌ನಲ್ಲಿದ್ದ ಕಾಲದಲ್ಲಿ ಅರುಣ್‌ರನ್ನು ಮುಂಬೈ ತಂಡಕ್ಕೆ ವಲಸೆ ಬರುವಂತೆ ರವಿಶಾಸ್ತ್ರಿ ಆಹ್ವಾನಿಸಿದ್ದರು. ಆಗ ಕರ್ನಾ ಟಕದ ಮೇಲಿನ ಪ್ರೀತಿಯಿಂದ ಇಲ್ಲೇ ಉಳಿದಿದ್ದ ಅರುಣ್, ಮುಂದೊಂದು ದಿನ ಕ್ರಿಕೆಟ್ ಮೇಲಿನ ಪ್ರೀತಿಯಿಂದ ಅಸ್ಸಾಂ ಹಾಗೂ ಗೋವಾ ತಂಡ ಗಳನ್ನು ಪ್ರತಿನಿಧಿಸುವ ಕಾಲವೂ ಬಂತು. ಶೈಶವಾವಸ್ಥೆ ಯಲ್ಲಿದ್ದ ಅಸ್ಸಾಂ ಕ್ರಿಕೆಟ್‌ಗೆ ರಾಷ್ಟ್ರೀಯ ಸ್ಥಾನಮಾನ ಕೊಡಿಸುವಲ್ಲಿ ಅರುಣ್ ಪಾತ್ರ ದೊಡ್ಡದು.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬೆಂಗ ಳೂರು ರಾಯಲ್ ಚಾಲೆಂಜರ್ಸ್ ತಂಡ ಪ್ರತಿನಿಧಿಸುವ ಅರುಣ್, ತರಬೇತುದಾರನಾಗಿ (ಎನ್‌ಸಿಎ ಲೆವೆಲ್-2 ಕೋಚ್ ಸರ್ಟಿಫಿಕೇಟ್ ಹೊಂದಿದ್ದಾರೆ) ಹೊಸ ಇನಿಂಗ್ಸ್ ಆರಂಭಿಸುವ ಉತ್ಸಾಹದಲ್ಲಿದ್ದಾರೆ. ಜೊತೆಗೆ, ಅವರು ಐಪಿಎಲ್ ಮತ್ತು ಕೆಪಿಎಲ್ ಮೂಲಕ ಇಪ್ಪತ್ತು20 ಮಾದರಿ ಆಟಗಾರನಾಗಿಯೂ ಮುಂದುವರಿಯಲಿದ್ದಾರೆ.
ಅರುಣ್ ಬಾಲಕರಾಗಿದ್ದಾಗ ಮನೆಯಲ್ಲಿ ಹೆಬ್ಬಾವು ಸಾಕಿದ್ದರು. ಅವರು ಎಷ್ಟೋ ಬಾರಿ ಜೊತೆ ಯಲ್ಲಿ ಹಾವು (ಜೀವಂತ) ತಂದು ಜೊತೆ ಆಟಗಾರ ರನ್ನು ಹೆದರಿಸಿದ್ದ ದಿನಗಳೂ ಇದ್ದವು. ಬ್ಯಾಟಿಂಗ್‌ಗೆ ತೆರಳುವ ಮುನ್ನ ಗಾಜು ಒಡೆದರೆ ತಮಗೆ ಅದೃಷ್ಟ ಎನ್ನುವುದು ಅವರ ನಂಬಿಕೆಯಾಗಿತ್ತು.
No comments:
Post a Comment