2008 ಆಗಸ್ಟ್ 16ರಂದು ಬೀಜಿಂಗ್ನಲ್ಲಿ 9.69 ಸೆಕೆಂಡ್ಗಳಲ್ಲಿ 100ಮೀ. ಓಡಿ ವಿಶ್ವದಾಖಲೆ ನಿರ್ಮಿಸಿದ್ದ ಬೋಲ್ಟ್ ಸರಿಯಾಗಿ ಒಂದು ವರ್ಷ ಬಳಿಕ 9.58 ಸೆ.ಗಳಲ್ಲಿ ಓಡಿದ್ದಾರೆ
ಆ ಹಳ್ಳಿಯಲ್ಲಿ ಬೀದಿ ದೀಪಗಳಿಲ್ಲ. ಕುಡಿಯುವ ನೀರಿನ ಅಭಾವ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದರೆ, ನೂರಾರು ವರ್ಷ ಹಿಂದಕ್ಕೆ ಹೋದಂತೆ ಭಾಸವಾಗುತ್ತದೆ. ಹಳ್ಳಿಯ ಹಿರಿಯರು ಕತ್ತೆಯ ಮೇಲೆ ಸಂಚರಿಸುತ್ತಿರುತ್ತಾರೆ. ಮಕ್ಕಳೆಲ್ಲಾ ಪಾತ್ರೆ, ಬೋಗುಣಿ ಹಿಡಿದು ಮೂಲೆಯಲ್ಲಿರುವ ನಲ್ಲಿಯ ನೀರು ತುಂಬಿಸಿಕೊಳ್ಳಲು ನಿಂತಿರುತ್ತಾರೆ. ರಸ್ತೆಯಲ್ಲಿ ಒಂದು ಕಾರು ಹೋದರೂ, ಎಲ್ಲರೂ ಖುಷಿಯಿಂದ ಕೈಬೀಸುತ್ತಾರೆ....
`ಅವನು ಹೋದ ವರ್ಷ ಮೂರು ಚಿನ್ನ ಗೆದ್ದಿದ್ದರಿಂದ ಹಳ್ಳಿಯ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಕಡಿಮೆಯಾಗಿದೆ. ಈ ವರ್ಷ ಒಂದು ಚಿನ್ನ ಗೆದ್ದರೆ, ರಸ್ತೆ ಸ್ವಲ್ಪ ಸುಧಾರಿಸಬಹುದು' ಎಂದು ಹಳ್ಳಿಯ ಅಜ್ಜಿಯೊಬ್ಬರು ಹೇಳುತ್ತಾರೆ.
ಇದು ವಿಶ್ವದ ಅತ್ಯಂತ ವೇಗದ ಓಟಗಾರ ಉಸೇನ್ ಬೋಲ್ಟ್‌ರ ಹುಟ್ಟೂರು ಶೆರ್ವುಡ್ ಕಂಟೆಂಟ್‌ನ ಚಿತ್ರಣ. ಜಮೈಕಾ ರಾಜಧಾನಿ ಕಿಂಗ್ಸ್‌ಟನ್‌ನಿಂದ ಸುಮಾರು ಮೂರುವರೆ ಗಂಟೆ ಪ್ರಯಾಣದಷ್ಟು ದೂರದಲ್ಲಿರುವ ಟ್ರೆಲಾವ್ನಿ ಪಟ್ಟಣದ ವ್ಯಾಪ್ತಿಗೆ ಸೇರುವ ಈ ಹಳ್ಳಿಯಲ್ಲೇ ಬೋಲ್ಟ್ ಬಾಲ್ಯದ ದಿನಗಳನ್ನು ಕಳೆದಿದ್ದು.
ಆ ಹಳ್ಳಿಯ ಭಾಗ್ಯದ ಬಾಗಿಲು ತೆರೆದಿದೆ. ಬೋಲ್ಟ್ ಗೆಲ್ಲುತ್ತಲೇ ಇದ್ದಾರೆ. ಬೀಜಿಂಗ್‌ನ ಪರಾಕ್ರಮದ ಬಳಿಕ ಅವರು ಜರ್ಮನಿಯ ಬರ್ಲಿನ್‌ನಲ್ಲಿ ಭಾನುವಾರ ರೋಮಾಂಚನದ ದೀಪ ಹಚ್ಚಿದ್ದಾರೆ.
ಈ ಮನುಷ್ಯ (ನಿಜವಾಗಿಯೂ ಮನುಷ್ಯನೇ ಎನ್ನುವುದು ಅಚ್ಚರಿಯ ಉದ್ಗಾರ) ಅದೆಷ್ಟು ವೇಗವಾಗಿ ಓಡಬಲ್ಲ ಎಂಬ ಅರಿವಾಗದೆ ಜಗ ಬೆರಗಿನಲ್ಲಿ ಮುಳುಗಿದೆ. ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 100 ಮೀ. ಅಂತರವನ್ನು 9.69 ಸೆಕೆಂಡ್‌ನಲ್ಲಿ ಕ್ರಮಿಸಿ ವಿಶ್ವದಾಖಲೆ ನಿರ್ಮಿಸಿದ್ದ ಬೋಲ್ಟ್, ಭಾನುವಾರ ಬರ್ಲಿನ್ ವಿಶ್ವ ಅಥ್ಲೆಟಿಕ್ಸ್ ಕೂಟದಲ್ಲಿ 9.58 ಸೆಕೆಂಡ್‌ಗಳಲ್ಲಿ ಓಡಿದ್ದಾರೆ. ಅದೊಂದು ಅತಿಮಾನುಷ ಓಟ. ಮಿಂಚಿನ ವೇಗದಲ್ಲಿ, ಬೆಳಕಿನ ವೇಗದಲ್ಲಿ ಅವರು ಓಡುತ್ತಾರೆ. ಕೂಟದಿಂದ ಕೂಟಕ್ಕೆ ಓಟದ ದಾಖಲೆಯನ್ನು ಸುಧಾರಿಸುತ್ತಲೇ ಇರುವ ಈ ಬೋಲ್ಟ್, ಮುಂದೊಂದು ದಿನ ಇನ್ನೂ ಎಷ್ಟು ವೇಗವಾಗಿ ಓಡಬಹುದು ಎನ್ನುವುದು ಊಹೆಗೂ ನಿಲುಕುವುದಿಲ್ಲ.
ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಬೋಲ್ಟ್ ವಿಶ್ವದಾಖಲೆ ಸಹಿತ 100ಮೀ. ಚಿನ್ನ ಗೆದ್ದರೂ, ಸಾರ್ವತ್ರಿಕವಾಗಿ ಟೀಕೆಗೊಳಗಾಗಿದ್ದರು. ಏಕೆಂದರೆ, ಅವರು ವಿಜಯ ರೇಖೆ ತುಳಿಯುವ ಮುನ್ನವೇ ಹಿಂತಿರುಗಿ ಸಹ ಸ್ಪರ್ಧಿಗಳತ್ತ ನೋಡಿದ್ದರು. ಎದೆ ಬಡಿದುಕೊಳ್ಳುತ್ತ ಗೆಲ್ಲುವ ಮುನ್ನವೇ ಗೆಲುವಿನ ಸಂಭ್ರಮ ಆಚರಿಸಿದ್ದರು. ಅದರಿಂದಾಗಿ ಕ್ರೀಡೆಯೆಡೆಗೆ ಅವರ ಬದ್ಧತೆಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಅಧ್ಯಕ್ಷ ಜಾಕ್ಸ್ ರೋಗ್ ಸೇರಿದಂತೆ ಹಲವರು ಪ್ರಶ್ನಿಸಿದ್ದರು. ಇತ್ತ ಬಯೋಮೆಕಾನಿಕಲ್ ತಜ್ಞರು, ಬೋಲ್ಟ್ ಬೀಜಿಂಗ್‌ನಲ್ಲಿ ಪೂರ್ಣ ಸಾಮರ್ಥ್ಯ ವಿನಿಯೋಗಿಸಿ 100ಮೀ. ಓಡಿದ್ದರೆ ಎಷ್ಟು ಸೆಕೆಂಡ್‌ನಲ್ಲಿ ಕ್ರಮಿಸಿರುತ್ತಿದ್ದರು ಎಂದು ಲೆಕ್ಕಾಚಾರ ಹಾಕಿದ್ದರು. ಗುರಿ ತಲುಪುವ ಮುನ್ನ ನಿಧಾನವಾಗದೆ, ಪೂರ್ಣ ವೇಗದಲ್ಲಿ ಓಡಿದ್ದರೆ, ಅವರು 9.69 ಸೆಕೆಂಡ್‌ಗೆ ಬದಲು 9.55 ಸೆಕೆಂಡ್‌ಗಳ ವಿಶ್ವದಾಖಲೆ ಮಾಡಿರುತ್ತಿದ್ದರು ಎಂದು ಅಂದಾಜಿಸಿದ್ದರು. ವಿಶ್ವದಲ್ಲಿ 9.6 ಸೆಕೆಂಡ್‌ಗಳಿಗೂ ಕಡಿಮೆ ಅವಧಿಯಲ್ಲಿ 100ಮೀ. ಓಡುವುದು ಸಾಧ್ಯವಿದ್ದರೆ ಅದು ಬೋಲ್ಟ್‌ಗೆ ಎಂದು ಅವರು ಅಭಿಪ್ರಾಯ ಪಟ್ಟಿದ್ದರು.
ಬೋಲ್ಟ್ ಓರ್ವ ಜಾಲಿ ಮನುಷ್ಯ. ಉಡಾಫೆೆ ಜಾಸ್ತಿ. ವೇಗದ ಕಾರುಗಳು, ಬೀದಿ ಬದಿ ತಿನಿಸುಗಳು, ನೈಟ್ ಕ್ಲಬ್‌ಗಳೆಂದರೆ ಪಂಚಪ್ರಾಣ. ಸಂಗೀತ ಹಾಗೂ ನರ್ತನ ಅವರ ನೆಚ್ಚಿನ ವಿಷಯಗಳು. ಯಾವುದೇ ರೇಸ್ ಗೆದ್ದ ಬಳಿಕ ಅವರು ನರ್ತನ ಕೌಶಲ್ಯ ಪ್ರದರ್ಶಿಸುವುದೇ ಅದಕ್ಕೆ ಸಾಕ್ಷಿ. ಇಷ್ಟೆಲ್ಲಾ ಆಕರ್ಷಣೆಗಳಿದ್ದ ಮೇಲೆ ಸ್ವಲ್ಪ ಶಿಸ್ತಿನ ಕೊರತೆ ಇರುವುದು ಸಹಜವೇ. ವೃತ್ತಿಜೀವನದ ಆರಂಭದ ದಿನಗಳಲ್ಲಿ ಅವರು ಟೀಕೆಗೆ ತುತ್ತಾಗಿದ್ದು ಸಹ ಇದೇ ಕಾರಣಕ್ಕಾಗಿ. ಜಮೈಕಾದಲ್ಲಿ ಒಮ್ಮೆ ಕ್ರೀಡಾಕೂಟವೊಂದಕ್ಕೆ ಮುನ್ನ ತರಬೇತಿ ತಪ್ಪಿಸಿಕೊಳ್ಳುವ ಸಲುವಾಗಿ ಅವರು ವ್ಯಾನ್‌ನ ಹಿಂದೆ ಅವಿತುಕೊಂಡಿದ್ದರು. ಪೊಲೀಸರಿಗೆ ಅನುಮಾನ ಬಂದು ಹಿಡಿದುಕೊಂಡು ಹೋದರು. ಕೊನೆಗೂ ಅದೊಂದು ದೊಡ್ಡ ರಾಮಾಯಣವೇ ಆಯಿತು. ಆದರೆ, ಆ ಕೂಟದಲ್ಲೇ ಅವರು 100ಮೀ. ಹಾಗೂ 200ಮೀ.ನಲ್ಲಿ ಜೂನಿಯರ್ ವಿಭಾಗದ ವಿಶ್ವದಾಖಲೆ ಮಾಡಿ ಎಲ್ಲರ ಬಾಯಿ ಮುಚ್ಚಿಸಿದರು.
2004ರಲ್ಲಿ ವೃತ್ತಿಪರ ಓಟಗಾರರಾದ ಬೋಲ್ಟ್, ಆರಂಭದ ಎರಡು ವರ್ಷ ಗಾಯಗಳಿಂದ ಬಳಲಿದರು. ಅದಾಗಲೇ ಹತ್ತು ಹಲವು ಕಿರಿಯರ/ ಯುವ ಕೂಟಗಳಲ್ಲಿ ದಾಖಲೆ ನಿರ್ಮಿಸಿದ್ದರೂ, ಒಲಿಂಪಿಕ್ಸ್ ಅಥವಾ ವಿಶ್ವ ಅಥ್ಲೆಟಿಕ್ಸ್ ಕೂಟಗಳಲ್ಲಿ ಅವರಿಗೆ ಗಾಯ ಅಡ್ಡಿಯಾಗುತ್ತಿತ್ತು. 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ 18 ವರ್ಷದ ಬೋಲ್ಟ್ 200 ಮೀ. ಓಟದ ಫೈನಲ್ ತಲುಪಲು ವಿಫಲರಾದರು. ಅಲ್ಲಿಯವರೆಗೂ 400ಮೀ. ಮತ್ತು 200 ಮೀ. ಗಳಲ್ಲಿ ಓಡುತ್ತಿದ್ದ ಬೋಲ್ಟ್ ಆನಂತರದ ದಿನಗಳಲ್ಲಿ 100 ಮೀ.ನತ್ತ ಗಮನ ಕೇಂದ್ರೀಕರಿಸಿದರು. ಇದೂ ಸಹ ಒಂದು ಸ್ವಾರಸ್ಯಕರ ಘಟನೆಯೇ.
ಆರಂಭದಲ್ಲಿ 100ಮೀ. ಓಡುವ ಬೋಲ್ಟ್ ಇಚ್ಛೆಗೆ ಅವರ ಕೋಚ್ ಗ್ಲೆನ್ ಮಿಲ್ಸ್ ಸಮ್ಮತಿಸಿರಲಿಲ್ಲ. 2007ರ ಜಮೈಕಾ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ 200ಮೀ. ಓಟದ ದಾಖಲೆ ಮಾಡಿದರೆ ಮಾತ್ರ 100ಮೀ. ಓಡಲು ಅನುಮತಿ ನೀಡುವುದಾಗಿ ಅವರು ನಿರ್ಬಂಧಿಸಿದ್ದರು. ಪ್ರತಿಯಾಗಿ ಬೋಲ್ಟ್ 200 ಮೀ.ಗಳನ್ನು 19.75 ಸೆಕೆಂಡ್‌ಗಳಲ್ಲಿ ಓಡಿ 36 ವರ್ಷ ಹಳೆಯ ದಾಖಲೆ ಮುರಿದರು. ಅದಾದ ಬಳಿಕ ಕ್ರೇಟ್‌ನಲ್ಲಿ ನಡೆದ ಕೂಟದಲ್ಲಿ ಮೊಟ್ಟ ಮೊದಲ ಬಾರಿ 100ಮೀ. ಸ್ಪರ್ಧೆಯಲ್ಲಿ ಭಾಗವಹಿಸಿದರು. ಅಲ್ಲಿ ಅವರು 10.03ಸೆ. ಸಾಧನೆ ಮಾಡಿ ಚಿನ್ನ ಗೆದ್ದರು.
2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅವರು ಇತಿಹಾಸ ನಿರ್ಮಿಸಿದರು. 100ಮೀ., 200 ಮೀ. ಮತ್ತು 4/100ಮೀ. ರಿಲೆಯಲ್ಲಿ ವಿಶ್ವದಾಖಲೆ ಸಹಿತ ಸ್ವರ್ಣ ಗೆದ್ದ ಬೋಲ್ಟ್, 1984ರಲ್ಲಿ ಕಾರ್ಲ್ ಲೂಯಿಸ್ ಬಳಿಕ ಒಂದೇ ಒಲಿಂಪಿಕ್ಸ್‌ನಲ್ಲಿ ಈ ಮೂರೂ ಸ್ವರ್ಣ ಗೆದ್ದ ಮೊದಲ ಓಟಗಾರ ಎನಿಸಿದರು. ಮಾತ್ರವಲ್ಲ, ಒಂದೇ ಒಲಿಂಪಿಕ್ಸ್‌ನಲ್ಲಿ ಈ ಮೂರು ವಿಶ್ವದಾಖಲೆ ನಿರ್ಮಿಸಿದ ಮೊಟ್ಟಮೊದಲ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾದರು.
ಬೀಜಿಂಗ್‌ನಲ್ಲಿ ಸಾಧಿಸಿದ್ದು ಆಕಸ್ಮಿಕವಲ್ಲ ಎಂಬುದನ್ನು ಬರ್ಲಿನ್‌ನಲ್ಲಿ ಬುಧವಾರ ಅವರು ನಿರೂಪಿಸಿದರು. ಆದರೆ, ಇಲ್ಲಿಗೆ ಅವರು ತೃಪ್ತರಾಗುವುದಿಲ್ಲ. ಮಂಗಳವಾರ ಮತ್ತೆ ಅವರು 200ಮೀ. ಫೈನಲ್‌ನಲ್ಲಿ ಓಡಲಿದ್ದಾರೆ. ಅವರನ್ನು ಸೋಲಿಸಲು ಮನುಷ್ಯರಿಂದಂತೂ ಸಾಧ್ಯವಿಲ್ಲ. ಬೇರೆಯೇ ಶಕ್ತಿಗಳು ಕೆಲಸ ಮಾಡಬೇಕು.
ಬದುಕಿನಲ್ಲಿ ಬೋಲ್ಟ್ ಸ್ವಲ್ಪ ನಿಧಾನವಾಗಿದ್ದದ್ದು ಹುಟ್ಟಿನಲ್ಲಿ ಮಾತ್ರ ಎಂದು ಅವರ ಅಮ್ಮ ಜೆನ್ನಿಫರ್ ನೆನಪಿಸಿಕೊಳ್ಳುತ್ತಾರೆ. ನಿಗದಿಯಾದ ದಿನಕ್ಕಿಂತ ಒಂದೂವರೆ ವಾರ ತಡವಾಗಿ ಅವರು ಜನಿಸಿದ್ದರು. ಜಮೈಕಾದಲ್ಲಿ ಮಕ್ಕಳನ್ನು ಹೆರುವುದಕ್ಕೆ ಕಡಿವಾಣ ಇಲ್ಲದಿದ್ದರೂ, ಜೆನ್ನಿಫರ್ ಮಗ ಒಬ್ಬನೇ ಸಾಕೆಂದು ನಿರ್ಧರಿಸಿದ್ದರು. ಇದಕ್ಕೆ ಕಾರಣ, ಅವರ ಪತಿಗೆ ಅದಾಗಲೇ ಮೂರು ಮಕ್ಕಳಿದ್ದರು. ನೋಡಲು ಸಾಧಾರಣವಿದ್ದರೂ, ತಿಂಗಳ ಮಗುವಿಗೇ ಅಪಾರ ಶಕ್ತಿ ಇತ್ತು. ಮೂರು ತಿಂಗಳಿದ್ದಾಗ ಹಾಸಿಗೆಯಿಂದ ಕೆಳಗೆ ಬಿದ್ದ ಮಗು, ಸ್ವತಃ ಮೇಲೇರಲು ಪ್ರಯತ್ನಿಸುತ್ತಿತ್ತು ಎಂದು ಆ ತಾಯಿ ನೆನಪಿಸಿಕೊಳ್ಳುತ್ತಾರೆ.
ಬೋಲ್ಟ್ ಎಲ್ಲರಂಥಲ್ಲ ಎನ್ನುವುದನ್ನು ಅವರ ತಂದೆ ವೆಲ್ಲೆಸ್ಲೆ ಆಗಲೇ ಗುರುತಿಸಿದ್ದರು. ಅವರು ಶೆರ್ವುಡ್ ಕಂಟೆಂಟ್‌ನಲ್ಲಿ ದಿನಬಳಕೆ ವಸ್ತುಗಳ ಅಂಗಡಿ ನಡೆಸುತ್ತಿದ್ದರು. ಅಲ್ಲಿ ಹಂದಿ ಕಿವಿಯಿಂದ ಹಿಡಿದು ಬೇಯಿಸಿದ ತಿಂಡಿಗಳವರೆಗೆ ಎಲ್ಲವನ್ನೂ ಮಾರುತ್ತಾರೆ. ತಂದೆಯಂತೆಯೇ ಎತ್ತರವನ್ನು ಬಳುವಳಿಯಾಗಿ ಪಡೆದಿರುವ ಬೋಲ್ಟ್‌ಗೆ ತಮ್ಮ 6 ಅಡಿ 5 ಇಂಚು ಎತ್ತರದಿಂದಾಗಿ ಯಾವಾಗಲೂ ಓಟಗಳಲ್ಲಿ ಉತ್ತಮ ಆರಂಭ ಪಡೆಯುವುದು ಸಾಧ್ಯವಾಗುವುದಿಲ್ಲ. ಓಟದ ಪ್ರಾರಂಭದಲ್ಲಿ ಅವರು ಎಲ್ಲರಿಗಿಂತ ಹಿಂದಿರುತ್ತಾರೆ. ಆದರೆ, ಸುಮಾರು 30 ಮೀ. ಕ್ರಮಿಸುವಷ್ಟರಲ್ಲಿ ಅವರು ಎಲ್ಲರನ್ನು ಹಿಂದೆ ಹಾಕಿರುತ್ತಾರೆ.
ಆದರೂ, ಅವರ ಓಟದ ಸ್ಫೂರ್ತಿ ಇತರ ಓಟಗಾರರ ಶಕ್ತಿಯನ್ನೂ ಹೆಚ್ಚಿಸಿದೆ. ಹಾಗೆಂದೇ ಬರ್ಲಿನ್‌ನಲ್ಲಿ ಭಾನುವಾರ ಬೋಲ್ಟ್‌ರ 9.58ಸೆ. ಬೆನ್ನಲ್ಲೇ ಅಮೆರಿಕದ ಟೈಸನ್ ಗೇ ತಮ್ಮ ವೈಯಕ್ತಿಕ ಶ್ರೇಷ್ಠ 9.71ಸೆ.ಗಳಲ್ಲಿ ಓಡಿಬಂದರು. ಅಸಾಫ ಪಾವೆಲ್ ತಮ್ಮ ಋತುವಿನ ಶ್ರೇಷ್ಠ 9.84ಸೆ.ಗಳಲ್ಲಿ ಓಡಿದರು. ಆದರೂ, ಬೋಲ್ಟ್‌ರ ದಾಖಲೆ ಮುಂದೆ ಇವೆಲ್ಲವೂ ನಗಣ್ಯವೆನಿಸಿಬಿಡುತ್ತದೆ.
ಅದೂ, ಯಾವುದೇ ಉದ್ದೀಪನ ದ್ರವ್ಯದ ಪ್ರಭಾವ ವಿಲ್ಲದೆ ಪರಿಶುದ್ಧ ಹೃದಯ, ಶರೀರ ಹೊತ್ತುಕೊಂಡು ಅವರು ಓಡುತ್ತಾರೆ ಎನ್ನುವುದು ಅವರ ದಾಖಲೆಯ ಮೌಲ್ಯವನ್ನು ಹೆಚ್ಚಿಸುತ್ತದೆ.
ಬೋಲ್ಟ್ ಒಂದು ವೇಳೆ ಓಟಗಾರ ಆಗದೇ ಇದ್ದಿದ್ದರೆ...? ವೇಗದ ಬೌಲರ್ ಆಗಿರುತ್ತಿದ್ದರು. ಕ್ರಿಕೆಟ್ ಅವರ ಬಾಲ್ಯದ ನೆಚ್ಚಿನ ಕ್ರೀಡೆಯಾಗಿತ್ತು. ಅವರು ಪಾಕಿಸ್ತಾನ ತಂಡದ ಅದರಲ್ಲೂ ವಕಾರ್ ಯೂನಸ್ ಬೌಲಿಂಗ್‌ನ ಅಭಿಮಾನಿ. ಭಾರತದ ಸಚಿನ್ ತೆಂಡುಲ್ಕರ್ ಮತ್ತು ವಿಂಡೀಸ್‌ನ ಕ್ರಿಸ್ ಗೇಲ್ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಬ್ಯಾಟಿಂಗ್ ಅನ್ನೂ ಆರಾಧಿಸುವ ಬೋಲ್ಟ್, ಫುಟ್‌ಬಾಲ್ ಕ್ರೀಡೆಯನ್ನೂ ಇಷ್ಟ ಪಡುತ್ತಾರೆ. ಕಳೆದ ವರ್ಷ ಮ್ಯಾಂಚೆಸ್ಟರ್ ರೇಸ್ ಸಂದರ್ಭದಲ್ಲಿ ಮ್ಯಾಂಚೆಸ್ಟರ್
ಯುನೈಟೆಡ್ ಕ್ಲಬ್‌ಗೆ ಅವರು ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಕ್ರಿಶ್ಚಿಯಾನೊ ರೊನಾಲ್ಡೊಗೆ ಅವರು ಓಡುವ ಬಗ್ಗೆ ಸಲಹೆ ನೀಡಿದ್ದರು.
ಅಂದ ಹಾಗೆ ಶುಕ್ರವಾರ (ಆಗಸ್ಟ್ 21) ಬೋಲ್ಟ್‌ರ 23ನೇ ಜನ್ಮದಿನ. ಹ್ಯಾಪಿ ಬರ್ತ್ ಡೇ ಉಸೇನ್ ಸೇಂಟ್ ಲಿಯೊ ಬೋಲ್ಟ್!!!
No comments:
Post a Comment