Tuesday, June 23, 2009

ರಾಗ ಲಹರಿ


ಅನಿಶ್ಚಿತ ಕ್ರಿಕೆಟ್‌ನ ಅನಿಶ್ಚಿತ ಚಾಂಪಿಯನ್‌

ಪಾಕಿಸ್ತಾನ ಇಪ್ಪತ್ತು20 ವಿಶ್ವ ಕಪ್‌ ಗೆದ್ದಿದ್ದರಿಂದ ಆ ದೇಶ ದಲ್ಲಿ ಕ್ರಿಕೆಟ್‌ ಇನ್ನಷ್ಟು ಸೊಂಪಾಗಿ ಬೆಳೆಯಬಹುದು. ಕ್ರಿಕೆಟಿಗರ ಆತ್ಮವಿಶ್ವಾಸ ಹೆಚ್ಚಬಹುದು. ಕ್ರಿಕೆಟ್‌ ಮಂಡಳಿ ಇದುವರೆಗಿನ ನಷ್ಟವನ್ನು ತುಂಬಿಕೊಳ್ಳಬಹುದು. ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಕ್ರಿಕೆಟ್‌ ತಂಡದ ಘನತೆ ಮರುಸ್ಥಾಪನೆಯಾಗಬಹುದು. ಇದರ ಹೊರತಾಗಿ ಸಾಮಾಜಿಕವಾಗಿ ಇನ್ಯಾವುದಾದರೂ ಬದಲಾ ವಣೆ ಆಗುವುದು ಅನುಮಾನ. ತಂಡ ಇಂಗ್ಲೆಂಡ್‌ನಲ್ಲಿ ವಿಶ್ವಕಪ್‌ ಗೆದ್ದ ಮಾತ್ರಕ್ಕೆ ಇನ್ನು ಮುಂದೆ ಪಾಕಿಸ್ತಾನದಲ್ಲಿ ಯಾವುದೇ ಬಾಂಬ್‌ ಸ್ಫೋಟಿಸುವುದಿಲ್ಲ ಎಂದು ನಿರೀಕ್ಷಿಸುವುದು ಸಾಧ್ಯವೇ?
ಒಂದು ವೇಳೆ ಶ್ರೀಲಂಕಾ ಗೆದ್ದಿದ್ದರೆ, ಲಾಹೋರ್‌ ನಲ್ಲಿ ಉಗ್ರರ ದಾಳಿಗೆ ತುತ್ತಾದ ಮೂರೇ ತಿಂಗಳ ಅವಧಿಯಲ್ಲಿ ವಿಶ್ವ ಚಾಂಪಿಯನ್‌ ಪಟ್ಟಕ್ಕೇರಿದರೆಂದು ಅವರ ಮನೋಬಲ ಶ್ಲಾಘಿಸ ಬಹುದಿತ್ತು.
ಪಾಕಿಸ್ತಾನದಲ್ಲಿ ಅರಾಜಕ ವಾತಾವರಣ ಇರಬಹುದು. ಹೊರ ಜಗತ್ತಿನ ಕಣ್ಣಿಗೆ ಪಾಕಿಸ್ತಾನವೆಂದರೆ, ಭಯೋತ್ಪಾದನೆಯ ತೊಟ್ಟಿಲು, ಭೀತಿ ಮೂಡಿಸುವ ಜಾಗ, ಅಲ್ಲಿಗೆ ಪ್ರವಾಸ ತೆರಳು ವುದು ಅಪಾಯಕಾರಿಯೆಂಬ ಭಾವನೆ ಇರಬಹುದು. ಆದರೆ, ಅಲ್ಲಿನ ಆಟಗಾರರಿಗೆ ಅದು ಅವರ ಮನೆ. ಸಾಕಿದ ನಾಯಿ ಪಕ್ಕದ ಮನೆಯವರನ್ನು ಕಂಡರೆ ಬೊಗಳುತ್ತದೆ. ಮನೆಯವರ ಮುಂದೆ ಬಾಲ ಮುದುರುತ್ತದೆ. ಹಾಗಾಗಿ ಪಾಕ್‌ ಆಟಗಾರರ ಜೀವಕ್ಕೆ ಉಗ್ರರಿಂದ ಯಾವ ಅಪಾಯವೂ ಇಲ್ಲ. ಜನ ಸಾಮಾನ್ಯರು ದಿನಕ್ಕೊಂದು ಕಡೆ ಸಂಭವಿಸುವ ಬಾಂಬ್‌ ಸ್ಫೋಟದಲ್ಲಿ ಸಾಯುತ್ತಿರಬಹುದು. ಆದರೆ, ಕ್ರಿಕೆಟಿಗ ರೆಂದರೆ ಸಾಮಾನ್ಯರಲ್ಲವಲ್ಲ. ಶ್ರೀಮಂತ ವರ್ಗ ರಣಭೂಮಿಯಲ್ಲಿದ್ದರೂ ಸುಖವಾಗಿಯೇ ಇರುತ್ತಾರೆ. ಸಾವು-ನೋವು ಅನುಭವಿಸುವುದು ಬಡವರು ಮಾತ್ರ.
ಹಾಗಾಗಿ ಪಾಕ್‌ ಲಾರ್ಡ್ಸ್‌ನಲ್ಲಿ ಭಾನುವಾರ ಕಿರು ಮಾದರಿಯ ವಿಶ್ವಕಪ್‌ ಗೆದ್ದಿರುವುದಕ್ಕೂ ಭಯೋತ್ಪಾದನೆಗೂ ತಳಕು ಹಾಕುವ ಅಗತ್ಯವೇನೂ ಇಲ್ಲ. ಬದಲಿಗೆ ಅವರು, ತಮ್ಮ ಅನಿಶ್ಚಿತ ಆಟದ ಬಲ ದಿಂದಲೇ ಗೆದ್ದುಕೊಂಡರು ಎಂದರೆ ಸಮಂಜಸವಾದೀತು.
ಇತಿಹಾಸದಿಂದಲೂ ಪಾಕಿಸ್ತಾನ ಇಂಥ ಪಂದ್ಯದಲ್ಲಿ ಇದೇ ರೀತಿ ಆಡುತ್ತದೆ ಎಂದು ನಿರೀಕ್ಷಿಸುವುದು ಸಾಧ್ಯವಿಲ್ಲ. ಇಂಗ್ಲೆಂಡ್‌ನಲ್ಲಿ ಆಗಿದ್ದಾದರೂ, ಹಾಗೆಯೇ. ವಿಶ್ವಕಪ್‌ ಆರಂಭಕ್ಕೆ ಮುನ್ನ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಪಾಕ್‌ ಸೋಲನುಭವಿಸಿತ್ತು. ಗುಂಪಿನ ಹಂತದ ಪಂದ್ಯಗಳು ಆರಂಭವಾದಾಗ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ವಿರುದ್ಧ ಹೀನಾಯವಾಗಿ ಸೋಲುವ ಮೂಲಕ 8ರ ಘಟ್ಟ ತಲುಪುವುದೇ ಅನುಮಾನ ಎಂಬಂತಿತ್ತು. ಆದರೆ, ಹಾಲೆಂಡ್‌ ವಿರುದ್ಧ ಸಾಧಿಸಿದ ದೊಡ್ಡ ಗೆಲುವು ಬಡ್ತಿಗೆ ಸಾಕಾಯಿತು.
ಸೂಪರ್‌-8 ಹಂತದಲ್ಲೂ ಮೊದಲ ಪಂದ್ಯದಲ್ಲೇ ಶ್ರೀಲಂಕಾ ವಿರುದ್ಧ 19 ರನ್‌ ಸೋಲು ಅನುಭವಿಸುವ ಮೂಲಕ ಆಘಾತ ಅನುಭವಿಸಿತು. ಆದರೆ, ನ್ಯೂಜಿಲೆಂಡ್‌ ಮತ್ತು ಐರ್ಲೆಂಡ್‌ ವಿರುದ್ಧ ಅದ್ಭುತ ಆಟವಾಡಿ ಸೆಮಿಫೈನಲ್‌ ತಲುಪಿತು. ಇಲ್ಲಿಯ ವರೆಗೆ ಅಬ್ದುಲ್‌ ರಜಾಕ್‌ ಪುನರಾಗಮನ ಮತ್ತು ಉಮರ್‌ ಗುಲ್‌ ರಿವರ್ಸ್‌ ಸ್ವಿಂಗ್‌ ಬಲದಿಂದ ಯಶಸ್ಸು ಕಂಡಿದ್ದ ಪಾಕ್‌ ತಂಡವನ್ನು ಮುಂದಿನ ಎರಡು ಪಂದ್ಯಗಳಲ್ಲಿ ಅಫ್ರಿದಿ ಆಧರಿಸಿದರು. ಅಪರೂಪಕ್ಕೊಮ್ಮೆ ಸ್ಫೋಟಿಸುವ ಅಫ್ರಿದಿ ಉಪಾಂತ್ಯ ಮತ್ತು ಫೈನಲ್‌ನಲ್ಲಿ ಸತತ ಅರ್ಧ ಶತಕ ಬಾರಿಸಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳನ್ನು ಸೋಲಿಸಿದರು.
ವಿಶ್ವ ವಿಜೇತರ ತಂಡದಲ್ಲಿ ಯಾವುದೇ ಖ್ಯಾತನಾಮರಿರಲಿಲ್ಲ. ಇದ್ದವರಲ್ಲಿ ಮಿಸ್ಬಾ ಉಲ್‌ ಹಕ್‌ ಮತ್ತು ಸೊಹೈಲ್‌ ತನ್ವೀರ್‌ ಆದ್ಯಂತವಾಗಿ ಕಳಪೆ ಫಾರ್ಮ್‌ನಿಂದ ಹೊರಬರಲಿಲ್ಲ. ನಾಯಕ ಯೂನಸ್‌ ಖಾನ್‌ ಮತ್ತು ಮಾಜಿ ನಾಯಕ ಶೋಯಿಬ್‌ ಮಲಿಕ್‌ ಇಪ್ಪತ್ತು20 ತಂಡದಲ್ಲಿರಲು ಅರ್ಹರೇ ಅಲ್ಲ ಎಂದು ಟೂರ್ನಿ ನಡುವೆ ಆಯ್ಕೆ ಸಮಿತಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ ಅಬ್ದುಲ್‌ ಖಾದಿರ್‌ ಹೇಳಿದ್ದರು. ಆದರೆ, ಯೂನಸ್‌ ಟೂರ್ನಿಯುದ್ದಕ್ಕೂ ಸ್ಥಿರ ಆಟವಾಡಿದ್ದಲ್ಲದೆ, ಸ್ಫೂರ್ತಿಯುತವಾಗಿ ತಂಡ ಮುನ್ನಡೆಸಿದರು. ಮಲಿಕ್‌ ಫೈನಲ್‌ನಲ್ಲಿ ಉತ್ತಮ ಬ್ಯಾಟಿಂಗ್‌ ಮಾಡಿದರು. ಬೌಲಿಂಗ್‌ನಲ್ಲಿ ಅತ್ಯಧಿಕ ವಿಕೆಟ್‌ ಪಡೆದ ಗುಲ್‌ಗೆ ಸ್ಪಿನ್ನರ್‌ಗಳಾದ ಸಯೀದ್‌ ಅಜ್ಮಲ್‌ ಮತ್ತು ಶಾಹಿದ್‌ ಅಫ್ರಿದಿ ಅಮೋಘ ಬೆಂಬಲ ನೀಡಿದರು.
ಇಪ್ಪತ್ತು20 ಕ್ರಿಕೆಟ್‌ಗೆ ನಿವೃತ್ತಿ ಎನ್ನುವ ಪದ ಹೊಸದು. ಇದುವರೆಗೆ ಯಾರೂ ಆಗಿರಲಿಲ್ಲ. ಆಗುವ ಪ್ರಮೇಯವೂ ಒದಗಿರಲಿಲ್ಲ. ಆದರೆ, ಯೂನಸ್‌ ಖಾನ್‌ ವಿಶ್ವಕಪ್‌ ಗೆದ್ದೊಡನೆ, ಕಿರು ಮಾದರಿಯಿಂದ ನಿವೃತ್ತಿ ಘೋಷಿಸುವ ಮೂಲಕ ಇಮ್ರಾನ್‌ ಖಾನ್‌ರಂತಾಗಲು ಯತ್ನಿಸಿದರು.
ಹಾಗೆ ನೋಡಿದರೆ, ವಿಶ್ವಕಪ್‌ ಗೆದ್ದ ನಾಯಕ ಎಂಬ ಕಾರಣಕ್ಕೆ ಯೂನಸ್‌ ನಿವೃತ್ತಿಗೆ ಮಹತ್ವ. ಅವರು ನಾಯಕರಲ್ಲದೆ ಹೋಗಿದ್ದರೆ, ಪಾಕ್‌ ಇಪ್ಪತ್ತು20 ತಂಡಕ್ಕೆ ಸಹಜ ಆಯ್ಕೆಯೇನೂ ಆಗಿರಲಿಲ್ಲ. ಐಪಿಎಲ್‌ನಲ್ಲೂ 2008ರಲ್ಲಿ ಜೈಪುರ ತಂಡದ ಸದಸ್ಯರಾಗಿದ್ದ ಅವರು ಆಡುವ ಅವಕಾಶ ಪಡೆದಿದ್ದು 1 ಪಂದ್ಯದಲ್ಲಿ ಮಾತ್ರ.
ಹಾಲಿ ವಿಶ್ವಕಪ್‌ನಲ್ಲಿ ಐರ್ಲೆಂಡ್‌ ಸೂಪರ್‌-8 ತಲುಪಿದ್ದಕ್ಕಿಂತ, ಹಾಲೆಂಡ್‌, ಇಂಗ್ಲೆಂಡ್‌ ವಿರುದ್ಧ ಗೆದ್ದಿದ್ದು ದೊಡ್ಡ ಅಚ್ಚರಿ. ವೆಸ್ಟ್‌ ಇಂಡೀಸ್‌ ಸೆಮಿಫೈನಲ್‌ ತಲುಪಿದ್ದು ಇನ್ನೂ ದೊಡ್ಡ ಅಚ್ಚರಿ. ಕ್ರಿಸ್‌ ಗೇಲ್‌, ಡ್ವೇನ್‌ ಬ್ರಾವೊ ಮತ್ತು ಲೆಂಡ್ಲ್‌ ಸಿಮನ್ಸ್‌ ಆ ತಂಡದ ಯಶಸ್ಸಿನ ರೂವಾರಿಗಳು. ದಕ್ಷಿಣ ಆಫ್ರಿಕಾ ಎಂದಿನಂತೆ ಉಪಾಂತ್ಯದಲ್ಲಿ ಕಳಪೆ ಆಟವಾಡಿ ಸೋತಿತು. ಶ್ರೀಲಂಕಾ ಟೂರ್ನಿಯುದ್ದಕ್ಕೂ ಅಜೇಯ ಆಟವಾಡಿದರೂ, ಶಾರ್ಟ್‌ ಪಿಚ್‌ ಎಸೆತಗಳ ವಿರುದ್ಧ ದಿಲ್ಶಾನ್‌ರ ದೌರ್ಬಲ್ಯ ಪ್ರಶಸ್ತಿ ಕೈತಪ್ಪಲು ಕಾರಣವಾಯಿತು. ಫೈನಲ್‌ ಪಂದ್ಯದವರೆಗೂ ಅವರ ಈ ಹುಳುಕು ಬೇರೆ ತಂಡಗಳ ಕಣ್ಣಿಗೆ ಬೀಳದೇ ಇದ್ದಿದ್ದು ಆಶ್ಚರ್ಯ.
ಭಾರತೀಯರು ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಮುನ್ನ ಕೆಲವು ದಿನ ವಿಶ್ರಾಂತಿ ಸಿಗಲಿ ಎಂಬ ಕಾರಣದಿಂದ ಉಪಾಂತ್ಯಕ್ಕೆ ಮೊದಲೇ ನಿರ್ಗಮಿಸಲು ಶಕ್ತಿ ಮೀರಿ ಪ್ರಯತ್ನಿಸಿ ಯಶಸ್ವಿಯಾದರು. ಕಳೆದ ಆವೃತ್ತಿಯ ಚಾಂಪಿಯನ್‌ ತಂಡ ಈ ಬಾರಿ ಸೂಪರ್‌-8ರಲ್ಲಿ ಎಲ್ಲಾ ಪಂದ್ಯ ಸೋತಿದ್ದು ದೊಡ್ಡ ಮುಖಭಂಗ. ಅದಕ್ಕೆ ಕಾರಣವಾದ ಅಂಶಗಳು ಎಲ್ಲರಿಗೂ ಗೊತ್ತಿರುವುದರಿಂದ ಕೆದಕುವುದು ಬೇಡ.
ಆತಿಥೇಯ ಇಂಗ್ಲೆಂಡ್‌ನ ಮಹಿಳಾ ತಂಡವನ್ನು ಮುಂದಿನ ಆವೃತ್ತಿಯಲ್ಲಿ ಪುರುಷರ ವಿಭಾಗದಲ್ಲಿ ಕಣಕ್ಕಿಳಿಸುವುದು ಮೇಲು. ನ್ಯೂಜಿಲೆಂಡ್‌ ಪರಂಪರೆಗೆ ಭಂಗವಾಗದಂತೆ ಆರಕ್ಕೇರದ ಮೂರಕ್ಕಿಳಿಯದ ಸಾಧನೆ ಮಾಡಿತು. ಆಸ್ಟ್ರೇಲಿಯಾ ಕಿರು ಮಾದರಿಯಲ್ಲಿ ಇನ್ನೂ ಶೈಶವಾವಸ್ಥೆಯಿಂದ ಹೊರಬಂದಿಲ್ಲ ಎನ್ನುವುದು ಸಾಬೀತಾ ಯಿತು. ಬಾಂಗ್ಲಾ ಮತ್ತು ಸ್ಕಾಟ್ಲೆಂಡ್‌ ಬಗ್ಗೆ ಹೇಳಲು ಏನೂ ಇಲ್ಲ.
ಭಾರತದ ಹೀನಾಯ ಸೋಲಿಗೆ ಐಪಿಎಲ್‌ನಲ್ಲಿ ಆಡಿ ಆಟಗಾರರು ದಣಿದಿದ್ದು ಹಾಗೂ ಗಾಯಗೊಂಡಿದ್ದು ಕಾರಣ ಎಂಬ ಚರ್ಚೆ ದೇಶವ್ಯಾಪಿಯಾಗಿ ನಡೆಯುತ್ತಿದೆ. ಆದರೂ, ಕ್ರಿಕೆಟ್‌ ವಲಯದಲ್ಲಿ ಅದರಲ್ಲೂ ಆಡಳಿತಗಾರರ ವಲಯದಲ್ಲಿ ಐಪಿಎಲ್‌ ಅನ್ನು ದೂರಲು ಯಾರೂ ಸಿದ್ದರಿಲ್ಲ.
ಏಕೆಂದರೆ, ಅದರಿಂದ ಲಲಿತ್‌ ಮೋದಿಗೆ ಸಿಟ್ಟು ಬರುತ್ತದೆ!

3 comments:

  1. ಹಾಯ್ ಸರ್.....


    ಬ್ಲಾಗ್ ಲೋಕದಲ್ಲಿ ನಿಮ್ಮನ್ನ ನೋಡಿ ಖುಷಿ ಆಯ್ತು.... ಹೀಗೆ ಬರೆಯುತ್ತಾ ಇರಿ.....

    -ಜಿತೇಂದ್ರ

    ReplyDelete
  2. blog chennagide, krida lokada bagge bareyalu hecchu ottu nidi....http://ravirajgalagali.blogspot.com

    ReplyDelete