Sunday, June 21, 2009
ರಾಗ ಲಹರಿ
ಸಂಸ್ಕೃತಿ - ವಿಕೃತಿಗಳ ಅರ್ಥ ಚಿಂತನೆ
ಎಲ್ಲಾ ವಾದಗಳು ಕೊನೆಯವರೆಗೂ ನಿಲ್ಲುವುದಿಲ್ಲ.
ಏಕೆಂದರೆ, ಅವುಗಳಲ್ಲಿ ಬೋಧ ಇರುವುದಿಲ್ಲ.
ನವ್ಯ ಚಿಂತನೆಯ ಅದೆಷ್ಟೋ ವಿಚಾರವಾದಿಗಳ ಮಾತಿನಲ್ಲಿ ವಿಚಾರ ಇರುವುದಿಲ್ಲ. ವಾದ ಮಾತ್ರ ಇರುತ್ತದೆ. ಅದರಲ್ಲಿ ಸತ್ಯಾಸತ್ಯತೆಯ ಶೋಧಕ್ಕಿಂತ, ಯಾವುದೋ ಒಂದು ಉದ್ದೇಶ, ಸ್ವಾರ್ಥಹಿತ ಅಡಗಿರುತ್ತದೆ.
ವಿಚಾರವಾದದ ಸೋಗಿನಲ್ಲಿ, ಜಾತ್ಯತೀತವಾದದ ಕನ್ನಡಕ ತೊಟ್ಟುಕೊಂಡಿರುವ ಸಮಾಜದಲ್ಲಿ ದೇವರು, ಧರ್ಮ ಇತ್ಯಾದಿ ಪದಗಳನ್ನು ಉಲ್ಲೇಖಿಸುವುದೂ ಕಷ್ಟ ಎಂಬಂತಿದೆ. ಏಕೆಂದರೆ, ಧರ್ಮ, ದೇವರು, ಸಂಪ್ರದಾಯಗಳ ಬಗ್ಗೆ ಮಾತನಾಡುವವರೆಲ್ಲಾ ಕೋಮುವಾದಿಗಳು ಎಂಬ ಭಾವನೆ ಇದೆ.
ರಾಷ್ಟ್ರವೆಂದರೇನು? ರಾಷ್ಟ್ರೀಯತೆ ಎಂದರೇನು? ರಾಷ್ಟ್ರೀಯತೆ ಎಂಬ ಕಲ್ಪನೆ ಅಥವಾ ಭಾವ ನಮಗೆ ಬ್ರಿಟಿಷರಿಂದ ದೊರೆತ ಬಳುವಳಿಯೇ? ಅದಕ್ಕಿಂತ ಮುನ್ನ ನಮ್ಮಲ್ಲಿ ಅದು ಇರಲಿಲ್ಲವೇ? ಇದನ್ನು ನಿರ್ಧರಿಸುವುದು ಬೌಗೋಳಿಕ ಆಧಾರದ ಮೇಲೆಯೇ ಅಥವಾ ಅದು ನಮ್ಮೊಳಗೇ ಅಂತರ್ಗತವಾಗಿದೆಯೇ?
ದೇವರು-ಧರ್ಮ ಇತ್ಯಾದಿ ಚಿಂತನೆಗಳನ್ನು ಧಿಕ್ಕರಿಸುವುದು ವಿಚಾರವಾದ, ಪುರಸ್ಕರಿಸುವುದು ಕೋಮುವಾದ ಎಂಬ ಭ್ರಮೆಯಿಂದ ಹೊರಬರುವುದು ಯಾವಾಗ?
ಸತ್ಯ ಯಾವಾಗಲೂ ಮುಖಕ್ಕೆ ಹೊಡೆದಂತಿರುತ್ತದೆ. ಹಾಗೆಂದೇ ಎಲ್ಲರಿಗೂ ಸತ್ಯ ಹೇಳುವ ಧೈರ್ಯ ಇರುವುದಿಲ್ಲ. ಸಮೂಹ ನಾಯಕತ್ವ, ಬಹುಮತದ ಆಧಾರದ ಮೇಲೆ ನಡೆಯುವ ಪ್ರಜಾಪ್ರಭುತ್ವದಲ್ಲಿ ಬಹುಜನರು ಅನುಸರಿಸುವುದೇ ಸತ್ಯವಿರಬೇಕು ಎಂದು ಎಲ್ಲರೂ ಹಿಂಬಾಲಿಸುವ ಪ್ರವೃತ್ತಿ ಇರುತ್ತದೆ. ಇಂಥ ಪ್ರವಾಹದ ಎದುರು ಸತ್ಯ ಈಜುವುದು ಕಷ್ಟವಾದರೂ, ಆಗೀಗ ಅಂಥ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ.
ಡಾ ಕೆಎಸ್ ನಾರಾಯಣಾಚಾರ್ಯ ಅವರ ಎರಡು ಭಾಷಣ, ಒಂದು ಲೇಖನದ ಸಂಕಲನ `ರಾಷ್ಟ್ರೀಯತೆ ಮತ್ತು ಸಂಸ್ಕೃತಿ' ಕೃತಿಯಲ್ಲಿ ರಾಷ್ಟ್ರ, ರಾಷ್ಟ್ರೀಯತೆ, ಸಂಸ್ಕೃತಿಗಳ ಅರ್ಥ- ಆಂತರ್ಯವನ್ನು ಬಿಡಿಸಿಡುವ ಸೂಕ್ಷ್ಮ ಪ್ರಯತ್ನವಿದೆ.
ಯಾವುದು ರಾಷ್ಟ್ರೀಯತೆ, ಯಾವುದು ಅಲ್ಲ; ಯಾವುದು ಕೋಮುವಾದ ಯಾವುದು ಅಲ್ಲ, ಯಾವುದು ಧರ್ಮಾಂಧತೆ, ಯಾವುದು ಅಲ್ಲ... ಇತ್ಯಾದಿ ಗೊಂದಲಗಳನ್ನು ಆಚಾರ್ಯರು ಕೃತಿಯಲ್ಲಿ ನಿವಾರಿಸುತ್ತಾರೆ.
ಎಲ್ಲರನ್ನೂ ತೃಪ್ತಿ ಪಡಿಸುವ ಸಾಹಸ ನನಗೆ ಬೇಡ. ಅದು ಆಗುವುದೂ ಅಲ್ಲ. ಅದರಿಂದ ಯಾವ ಸಾಧನೆಯೂ ಇಲ್ಲವೆಂಬುದು ನನ್ನ ಗ್ರಹಿಕೆ. ಇಲ್ಲಿರುವುದು ನಾಡಿನ ಹಿತ, ಕ್ಷೇಮ, ಸಂಸ್ಕೃತಿ, ಭಾಷೆ, ಮೌಲ್ಯಗಳ ರಕ್ಷಣೆಯ ಅಗತ್ಯಗಳ ಪ್ರತಿಪಾದನೆ ಎಂದು ಮುನ್ನುಡಿಯಲ್ಲಿ ಹೇಳಿಕೊಂಡಿರುವ ಲೇಖಕರು ಅದಕ್ಕೆ ತಕ್ಕಂತೆ ವಿಚಾರವಾದಿಗಳ ಆಕ್ರೋಶಕ್ಕೆ ಆಹಾರವಾಗುವ ವಿಚಾರಗಳನ್ನೇ ಕೆದಕಿದ್ದಾರೆ. ಅವರು ಹೇಳುವ ಎಲ್ಲಾ ವಿಚಾರಗಳನ್ನೂ ಒಪ್ಪಿಕೊಳ್ಳಬೇಕೆಂದಿಲ್ಲ. ಆದರೆ, ಮತ್ತಷ್ಟು ಮರುಚಿಂತನೆಗೆ ತೊಡಗಲು ಗ್ರಾಸ ಒದಗಿಸುತ್ತದೆ.
ಹಿಂದೂ ದೇವತೆಗಳನ್ನು ಅವಮಾನಗೊಳಿಸುವಂತೆ, ಅಶ್ಲೀಲ ಭಂಗಿಯ ಚಿತ್ರಗಳನ್ನು ರಚಿಸುವ ಎಂಎಫ್ ಹುಸೇನ್ ಬಗ್ಗೆ ಆಚಾರ್ಯರು ತಮ್ಮ ಆಕ್ರೋಶವನ್ನು ಅಕ್ಷರಗಳಲ್ಲಿ ಹೊರಹಾಕಿದ್ದಾರೆ. ಹುಸೇನ್‌ರಿಗೆ ವಿರೋಧಿಗಳಿರುವಂತೆಯೇ, ಅಭಿವ್ಯಕ್ತಿ ಸ್ವಾತಂತ್ಯ್ರದ ಹೆಸರಿನಲ್ಲಿ ಅವರನ್ನು ಬೆಂಬಲಿಸುವವರೂ ಇದ್ದಾರೆ. ಆದರೂ, ಹುಸೇನ್‌ರ ವಿವಾದಿತ ಚಿತ್ರಗಳನ್ನು ಪ್ರಕಟಿಸುವ ಮೂಲಕ ಅವರ ಕಲೆಯನ್ನು ಆಸ್ವಾದಿಸಬೇಕೋ, ವಿರೋಧಿಸಬೇಕೋ ಎಂಬ ಆಯ್ಕೆಯನ್ನು ಲೇಖಕರು ಓದುಗರಿಗೇ ಬಿಟ್ಟಿದ್ದಾರೆ.
Subscribe to:
Post Comments (Atom)
No comments:
Post a Comment