Friday, August 26, 2011

ನಿಧಾನ, ಸಮಾಧಾನ

ಸೋಲಿಗೂ, ಗೆಲುವಿಗೂ ಸಿದ್ಧ ಮಾದರಿ ಎಂಬುದಿರುವುದಿಲ್ಲ.
ಗೆಲುವಿನ ಮೈಮರೆವು ಸೋಲಿಗೆ ದಾರಿಯಾಗಬಹುದು.
ಸೋಲು ಮೂಡಿಸಿದ ಅರಿವು ಗೆಲುವಿನತ್ತ ಕೊಂಡೊಯ್ಯಬಹುದು.
ಭಾರತ ತಂಡ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ 0-4 ಅಂತರದಿಂದ ಸೋತಿದ್ದಾಗಿದೆ.
ಇನ್ನು ಟಿ20 ಹಾಗೂ ಏಕದಿನ ಸರಣಿಗಳ ಸರದಿ.
ಅಲ್ಲಿ ಸೋತ ಭಾರತ ಇಲ್ಲಿಯೂ ಸೋಲಲೇಬೇಕೆಂದೇನೂ ಇಲ್ಲ.
ಭಾರತ ಗೆಲ್ಲುವುದು ಕಷ್ಟ, ಸೋತೇ ಹೋಗಲಿದೆ ಎಂಬ ಆತಂಕವೂ ಬೇಡ.
ಏಕೆಂದರೆ ಭಾರತ ಟೆಸ್ಟ್ ಸರಣಿಯಲ್ಲಿ ಎದುರಿಸಿದ ಇಂಗ್ಲೆಂಡ್ ತಂಡವೇ ಬೇರೆ.
ಏಕದಿನ ಸರಣಿಯಲ್ಲಿ ಎದುರಾಗುವ ಇಂಗ್ಲೆಂಡ್ ತಂಡವೇ ಬೇರೆ.
ಇತ್ತೀಚಿನ ವರ್ಷಗಳಲ್ಲಿ ಏಕದಿನ ಪಂದ್ಯಗಳು ಜಗತ್ತಿನ ಯಾವ ಮೂಲೆಯಲ್ಲಿ ನಡೆದರೂ ಅಂಥ ವ್ಯತ್ಯಾಸವೇನೂ ಆಗುವುದಿಲ್ಲ. ತವರಿನ ಅನುಕೂಲವೆಂಬ ಅಂಶವೀಗ ಗೌಣವಾಗಿದೆ.
ಭಾರತದ ವಿಷಯಕ್ಕೆ ಬಂದರೆ ಧೋನಿ ಬಳಗ ವಿಶ್ವ ಚಾಂಪಿಯನ್. ಟೆಸ್ಟ್ ತಂಡದಲ್ಲಿ ಭಾರತದ ಯಶಸ್ಸಿಗೆ ಅನುಭವಿ ತ್ರಿವಳಿಗಳ ಆಟ ನಿರ್ಣಾಯಕವಾಗಿದ್ದರೆ, ಏಕದಿನಗಳಲ್ಲಿ ಭಾರತ ಆ ಅವಲಂಬನೆಯಿಂದ ಯಾವಾಗಲೋ ಹೊರಗೆ ಬಂದಿದೆ.
ವೀರೇಂದ್ರ ಸೆಹ್ವಾಗ್ ಗೈರು ದೊಡ್ಡ ಕೊರತೆಯೇ ಹೌದು. ಆದರೂ, ಏಕದಿನಗಳಲ್ಲಿ ಭಾರತದ ಸಾಮರ್ಥ್ಯ ಯಾವುದೇ ಒಬ್ಬ ಆಟಗಾರನಿಗೆ ಸೀಮಿತಗೊಂಡಿಲ್ಲ. ತೆಂಡುಲ್ಕರ್, ಗಂಭೀರ್, ಕೊಹ್ಲಿ, ರೈನಾ, ರೋಹಿತ್, ಧೋನಿ ಇರುವ ಭಾರತ ತಂಡದೆದರು ಆತಂಕ ಪಡಬೇಕಿರುವುದು ಇಂಗ್ಲೆಂಡ್.
ಒಂದು ಮುಖ್ಯ ವಿಷಯವೆಂದರೆ ಇಂಗ್ಲೆಂಡ್ ನ ಪರಮ ಆದ್ಯತೆ ಏಕದಿನ ಕ್ರಿಕೆಟ್ ಅಲ್ಲ. ಅವರು ವಿಶ್ವಕಪ್ ಗೆದ್ದಿಲ್ಲ ಎಂಬ ಅವಮಾನವನ್ನು ಆಶಸ್ ಗೆದ್ದಿದ್ದೇವೆ ಎಂಬ ಸಂಭ್ರಮದಲ್ಲೇ ಮರೆಯುವವರು.
ಈ ವರ್ಷ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಆಶಸ್ ಸರಣಿ ಗೆದ್ದ ಮೇಲೆ ಇಂಗ್ಲೆಂಡ್ ಏಕದಿನ ಸರಣಿಯಲ್ಲಿ 1-6 ಅಂತರದಿಂದ ಸೋತು ಹೋಯಿತು. ವಿಶ್ವಕಪ್ ನಲ್ಲೂ ಕ್ವಾರ್ಟರ್ ಫೈನಲ್ ಗಿಂತ ಮೇಲೆ ಬರಲಿಲ್ಲ. ಆದರೆ ಆ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದೂ ಇಲ್ಲ.
ಈಗಲೂ ಅಷ್ಟೇ ಭಾರತದ ವಿರುದ್ಧ ಏಕದಿನ ಸರಣಿ ಗೆದ್ದರೆ ಅವರಿಗದು ಬೋನಸ್. ವಿಶ್ವ ಚಾಂಪಿಯನ್ನರ ವಿರುದ್ಧ ಗೆದ್ದೆವು ಎಂದು ಬೀಗುತ್ತಾರೆ. ಅದೇ ಸೋತರೆ, ಅವರಿಗೆ ಬೇಸರವೇನೂ ಇಲ್ಲ. ಟೆಸ್ಟ್ ಸರಣಿ ಗೆದ್ದು ವಿಶ್ವ ನಂ.1 ಆಗಿದ್ದೇವೆಲ್ಲಾ ಅದೇ ಯಥೇಚ್ಛ ಎನ್ನುತ್ತಾರವರು.
ಭಾರತಕ್ಕಿದು ಪ್ರತಿಷ್ಠೆಯ ಸರಣಿ. ತವರಿನಲ್ಲಿ ವಿಶ್ವಕಪ್ ಗೆದ್ದ ಮೇಲೆ ಭಾರತ ವಿಂಡೀಸ್ ನಲ್ಲಿ ಗೆದ್ದಿರಬಹುದು. ಆದರೆ, ಗಂಭೀರ ಸವಾಲು ಎದುರಾಗುತ್ತಿರುವುದು ಇಂಗ್ಲೆಂಡ್ ನಲ್ಲೇ. ಆದರೆ, ತಂಡ ಸೂಕ್ತ ಮನೋಸ್ಥಿತಿಯಿಂದ ಸರಣಿ ಪ್ರವೇಶಿಸುತ್ತಿದೆಯೇ?
ಭಾರತ ಬಲಾಢ್ಯ ತಂಡವೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಹೊಸ ಕೋಚ್ ಡಂಕನ್ ಫ್ಲೆಚರ್ ಒಡನಾಟ ಆಟಗಾರರಿಗಿನ್ನೂ ಹೊಸದು. ಅವರ ತರಬೇತಿ ವಿಧಾನಗಳು, ಅವರ ಮನೋಸ್ಥಿತಿ, ವಿಚಾರ ಲಹರಿ ಇವೆಲ್ಲವೂ ಇನ್ನೂ ಪೂರ್ತಿಯಾಗಿ ಅರ್ಥವಾಗಬೇಕು.
ಇಂಗ್ಲೆಂಡ್ ಕೋಚ್ ಆಗಿದ್ದಾಗ ಫ್ಲೆಚರ್ ಯಾವತ್ತೂ ಏಕದಿನಗಳಿಗೆ ಮಹತ್ವ ನೀಡಿರಲಿಲ್ಲ. ಟೆಸ್ಟ್ ಸಾಧನೆಗಳ ಬಗ್ಗೆ ಮಾತ್ರ ಅವರು ಗಮನ ಕೊಟ್ಟಿದ್ದರು. ಹಾಗೆಂದೇ ತಂಡ 50 ಓವರ್ ಮಾದರಿಯಲ್ಲಿ ಪ್ರಪಾತಕ್ಕೆ ಬಿದ್ದಿತ್ತು. ಅಂಥ ಫ್ಲೆಚರ್ ಕೈಗೆ ಈಗ ವಿಶ್ವ ಚಾಂಪಿಯನ್ ಭಾರತದ ಚುಕ್ಕಾಣಿ ದೊರೆತಿದೆ.
ಫ್ಲೆಚರ್ ನೇಮಕಾತಿ ನಡೆದು ತಿಂಗಳುಗಳೇ ಕಳೆದುಹೋಗಿರುವುದರಿಂದ ಅವರು ಈ ಹುದ್ದೆಗೆ ಸೂಕ್ತರೇ ಎಂದು ಈಗಲೂ ಚರ್ಚೆ ಮಾಡುವುದು ಸರಿಯಲ್ಲ. ಆದರೂ, ಟೆಸ್ಟ್ ಸರಣಿಯಲ್ಲಿ ಫ್ಲೆಚರ್ ವಿಚಾರ ಶೂನ್ಯರಾಗಿದ್ದರು. ಇಂಗ್ಲೆಂಡ್ ನ ವ್ಯೂಹಗಳ ಎದುರು ಇವರು ತಲೆ ಮೇಲೆ ಕೈಹೊತ್ತು ಕುಳಿತಿದ್ದರು. ಏಕದಿನಗಳಲ್ಲಿ ಹಾಗಾಗದಿದ್ದರೆ ಸಾಕು.
ಅಂದ ಹಾಗೆ ಆಯ್ಕೆಗಾರರು ರಾಹುಲ್ ದ್ರಾವಿಡ್ ಗೆ ಏಕದಿನಗಳಿಂದ ದೊಡ್ಡ ರೀತಿಯಲ್ಲಿ ವಿದಾಯ ಹೇಳಲು ಅವಕಾಶ ಮಾಡಿಕೊಟ್ಟಿದ್ದಾರೆ. ವಿದಾಯ ಸರಣಿಗಾಗಿ ಸ್ವತಃ ದ್ರಾವಿಡ್ ಏನೂ ಕೋರಿರಲಿಲ್ಲ. ಆದರೆ, ವಿಶ್ವ ಕಪ್ ಗೆ ನಿಮ್ಮ ಅಗತ್ಯವಿಲ್ಲ ಎಂದಿದ್ದ ಆಯ್ಕೆಗಾರರು ಇಂಗ್ಲೆಂಡ್ ನಲ್ಲಿ ಆಡಿ ಎಂದು ಆಹ್ವಾನ ನೀಡಿದ್ದು ದ್ರಾವಿಡ್ ರಂಥ ಮೇರು ಆಟಗಾರನಿಗೆ ಮಾಡಿದ ಅವಮಾನ. ಅದೇ ಕಾರಣಕ್ಕೆ ಅವರು ಏಕದಿನಗಳಿಂದ ವಿದಾಯ ಪ್ರಕಟಿಸಿದರು. ಅದೇನೇ ಇರಲಿ. ಉತ್ತುಂಗ ಫಾರ್ಮ್ ನಲ್ಲಿರುವ ದ್ರಾವಿಡ್ ಈ ಸರಣಿ ಅವಿಸ್ಮರಣಿಯವಾಗಿಸಿಕೊಳ್ಳಲು ಯತ್ನಿಸಲಿದ್ದಾರೆ.
ಟೆಸ್ಟ್ ತಂಡಕ್ಕೆ ಪರಿಗಣನೆಯಲ್ಲಿರಬೇಕಾದ ಅಜಿಂಕ್ಯ ರಹಾನೆ ಏಕದಿನ ತಂಡಕ್ಕೆ ಆಯ್ಕೆ ಆಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಹಾಲಿ ಸರಣಿಯಲ್ಲಿ ಅವರಿಗೆ ಅವಕಾಶ ಸಿಗುವುದು ಅನುಮಾನ. ಗಂಭೀರ್, ತೆಂಡುಲ್ಕರ್, ದ್ರಾವಿಡ್, ಕೊಹ್ಲಿ, ರೈನಾ, ರೋಹಿತ್, ಧೋನಿ ಮಧ್ಯೆ ರಹಾನೆ ನುಸುಳುವುದು ಬಹಳ ಕಷ್ಟ. ಆದರೂ, ಅವರು ಇಂದಲ್ಲ ನಾಳೆ ಭಾರತದ ಪರ ಆಡಲೇಬೇಕಾದ ಉತ್ತಮ ಆಟಗಾರ.

Thursday, August 18, 2011

ಗುರುತು




ಹೆಜ್ಜೆಗಳನ್ನು ಅನುಸರಿಸಿ
ಸಾಗುವುದಕ್ಕೇಕೆ ಲಜ್ಜೆ
ಕನಸುಗಳ ಹಾದಿಯಲ್ಲಿ
ಕಲ್ಪನೆಗಳ ಬೀದಿಯಲ್ಲಿ

ಅದೇಕೋ ಏನೋ
ಮನಸೆಲ್ಲಾ ತೋಯಿಸುವ
ಕಾತರ, ಆತುರ
ಬುದ್ಧಿಯ ಹಿಡಿತಕ್ಕೆ ಸಿಕ್ಕದ
ಚಡಪಡಿಕೆ
ಅಪಾರ

ಅಲ್ಲೆಲ್ಲೋ ದೂರ
ಇರುವಳಾಕೆ
ನೆನಪಿಗೆ ಬಲುಹತ್ತಿರ
ಸ್ಪಂದಿಸಲು ಸಾಲದು
ಈ ಅಕ್ಷರ

ಇದ್ದಾಗ ಬಲು ಸದರ
ಹೋದಾಗ ಮನ ಭಾರ
ಹೋಗಿದ್ದು
ನಾನೋ
ಅವಳೋ
ಪ್ರಶ್ನೆಗಿಲ್ಲ
ಉತ್ತರ

Sunday, July 24, 2011

ನಂಬಿ ಬಂದವರ ವಿಶ್ವಾಸಕ್ಕೆ ದ್ರೋಹವಾಗದಿರಲಿ...




ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು

ನಿಮ್ಮ ಮಡಿಲೊಳಗಿರಲು ತಂದಿರುವೆವು
ಕೊಳ್ಳಿರೀ ಮಗುವನ್ನು, ನಮ್ಮ ಮನೆ ಬೆಳಕನ್ನು....
-ವಿ. ಸೀತಾರಾಮಯ್ಯ



ಉತ್ತಮ ಬದುಕಿಗೆ ಅವಶ್ಯವಾದ ಎಲ್ಲಾ ಗುಣಗಳನ್ನು ಕಲಿಸುವ ಗುಣ ಕ್ರೀಡೆಗಿದೆ. ಆತ್ಮವಿಶ್ವಾಸ, ಏಕಾಗ್ರತೆ, ಪರಿಶ್ರಮ, ಸಂಯಮ, ಸಮಯಸ್ಫೂರ್ತಿ, ನ್ಯಾಯಪರತೆ, ನೈತಿಕತೆ ಇತ್ಯಾದಿ ಗುಣ-ಮೌಲ್ಯಗಳು ಯಶಸ್ವಿ ಕ್ರೀಡಾಪಟುವಾಗಲು ಅಗತ್ಯ ಎಂದು ಕ್ರೀಡೆ ಕಲಿಸುತ್ತದೆ. ಇನ್ನು ಕ್ರೀಡಾ ಸಾಧನೆಗಳಿಗೆ ಬಹುಮುಖ್ಯವಾದ ಅಡಿಪಾಯ ಪರಸ್ಪರ ವಿಶ್ವಾಸ. ಕ್ರೀಡಾಪಟುವಿಗೆ ತರಬೇತುದಾರನ ಮೇಲೆ, ತರಬೇತುದಾರನಿಗೆ ಕ್ರೀಟಾಪಟುವಿನ ಮೇಲೆ ವಿಶ್ವಾಸವಿಲ್ಲದೇ ಹೋದರೆ ಆಟ ನಡೆಯುವುದಿಲ್ಲ. ಆದರೆ, ಆ ವಿಶ್ವಾಸವೇ ಅತ್ಯಾಚಾರಕ್ಕೊಳಗಾಗುತ್ತಿರುವುದು ಕ್ರೀಡೆಯ ದುರಂತ.
ಪೋಷಕರು ತಮ್ಮ ಹಾಲುಗಲ್ಲದ ಹಸುಳೆಯನ್ನು ಕ್ರೀಡಾ ದೃಷ್ಟಿಕೋನದಿಂದ ಮಾತ್ರ ತಮಗೆ ಪರಿಚಯವಿರುವ ಒಬ್ಬ ಕೋಚ್ ಬಳಿಗೆ ತರಬೇತಿಗೆಂದು ಕಲಿಸುವುದು ವಿಶ್ವಾಸದಿಂದ. ನಮ್ಮ ಮಗಳೂ ಇವರ ಬಳಿ ಕಲಿತರೆ ದೊಡ್ಡ ಸಾಧನೆ ಮಾಡುತ್ತಾಳೆ ಎಂಬ ನಂಬಿಕೆ ಮಾತ್ರ ಅಲ್ಲಿರುತ್ತದೆ. ಆದರೆ, ಅಂಥ ವಿಶ್ವಾಸವನ್ನು ದುರುಪಯೋಗಪಡಿಸಿಕೊಳ್ಳುವ ಕೋಚ್ಗಳ ವಿಶ್ವಾಸಘಾತದ ಪ್ರಕರಣಗಳು ಸಮಾಜದ ಸ್ವಾಸ್ಥವನ್ನು ಕೆಡಿಸುತ್ತಿವೆ.
ತರಬೇತುದಾರನೆಂದರೆ ಗುರು. ಗುರು ದೇವರ ಸಮಾನ ಎನ್ನುವುದು ಭಾರತೀಯ ನಂಬಿಕೆ. ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಬೇಕೆನ್ನುವ ಏಕೈಕ ಕನಸಿನೊಂದಿಗೆ ತರಬೇತಿಗೆ ಬರುವ ಕ್ರೀಡಾಪಟುಗಳಲ್ಲಿ ನಿಶ್ಚಿತವಾಗಿಯೂ ಅನ್ಯ ಚಿಂತನೆಗಳಿರುವುದಿಲ್ಲ. ಆದರೆ, ಕೆಲವು ತರಬೇತುದಾರರು ಮುಗ್ಧ ಆಟಗಾರ್ತಿಯರನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ‘ಗುರುದಕ್ಷಿಣೆ’ ಪಡೆಯುವ ಪಿಡುಗು ಇಂದು ನಿನ್ನೆಯದೂ ಅಲ್ಲ.
ಕಳೆದ ವರ್ಷ ಹಾಕಿ ಆಟಗಾರ್ತಿ ರಂಜಿತಾ ಆಗ ರಾಷ್ಟ್ರೀಯ ಮಹಿಳಾ ತಂಡದ ಕೋಚ್ ಆಗಿದ್ದ ಮಹಾರಾಜ್ ಕಿಶನ್ ಕೌಶಿಕ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆದರೆ, ಕೌಶಿಕ್ ಕೋಚ್ ಹುದ್ದೆಯಿಂದ ಅಮಾನತುಗೊಂಡಿದ್ದು ಬಿಟ್ಟರೆ ಬೇರೇನೂ ಆಗಲಿಲ್ಲ. ಒಬ್ಬ ಸಾಮಾನ್ಯ ಅತ್ಯಾಚಾರಿಗೆ ಅನ್ವಯವಾಗುವ ಕಾನೂನು ಕ್ರೀಡಾ ಕೋಚ್ಗಳಿಗೆ ಯಾವತ್ತೂ ಅನ್ವಯಿಸುವುದಿಲ್ಲ. ಆರೋಪಗಳೆಲ್ಲವೂ ತಮ್ಮ ಹೆಸರು ಕೆಡಿಸಲು ಮಾಡುವ ಷಢ್ಯಂತ್ರ ಎಂಬ ನೆಪದಿಂದ ಅವರೆಲ್ಲರೂ ಜಾರಿಕೊಂಡು ಬಿಡುತ್ತಾರೆ.
ಒಲಿಂಪಿಕ್ಸ್ನಲ್ಲಿ ವೇಟ್ಲಿಫ್ಟಿಂಗ್ ಕಂಚು ಗೆದ್ದಿರುವ ಕರ್ಣಂ ಮಲ್ಲೇಶ್ವರಿ ಸಹ ಅನೇಕ ವರ್ಷಗಳಿಂದ ಕೆಲವು ವೇಟ್ಲಿಫ್ಟಿಂಗ್ ಕೋಚ್ಗಳು ಮುಗ್ಧ ಲಿಫ್ಟರ್ಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಸತತ 5 ಬಾರಿಯ ವಿಶ್ವ ಚಾಂಪಿಯನ್ ಎಂಸಿ ಮೇರಿಕೋಮ್ ಬಾಕ್ಸಿಂಗ್ನಲ್ಲೂ ಇಂಥ ಪಿಡುಗಿದೆ ಎಂದರು. ಅಥ್ಲೆಟಿಕ್ಸ್ನಲ್ಲೂ ಸಾಕಷ್ಟು ಮಾಜಿ ಅಥ್ಲೀಟ್ಗಳು ನಮ್ಮ ಕಾಲದಿಂದಲೂ ಉತ್ತಮ ಅವಕಾಶಕ್ಕೆ ಪ್ರತಿಯಾಗಿ ಲೈಂಗಿಕ ‘ಗುರುದಕ್ಷಿಣೆ’ ಪಡೆಯುವ ಪ್ರವೃತ್ತಿ ಇದೆ. ಆದರೆ, ನಮಗೆ ಅದರ ಅನುಭವ ಆಗಿಲ್ಲ ಎನ್ನುತ್ತಾರೆ. ಕೋಚ್ಗಳ ಕಾಮ ಪ್ರವೃತ್ತಿಗೆ ಬೇಸತ್ತು ಅದೆಷ್ಟೋ ಯುವ ಪ್ರತಿಭೆಗಳು ಕ್ರೀಡಾ ಕಣವನ್ನೇ ತೊರೆದು ಹೋಗಿದ್ದಾರೆ. ಕೆಲವು ಪ್ರತಿಭಾವಂತರ ಉತ್ತಮ ಸಾಧನೆಗೆ ಕೋಚ್ ಜೊತೆಗಿನ ‘ಹೊಂದಾಣಿಕೆ ಕಾರಣ’ ಎಂದು ಹೇಳುವವರೂ ಇದ್ದಾರೆ. ಕೋಚ್ ಮಾತ್ರವೇ ಅಲ್ಲ, ಆಯ್ಕೆಗಾರರು, ಒಕ್ಕೂಟಗಳ ಪದಾಧಿಕಾರಿಗಳು ವಿವಿಧ ತಂಡಗಳಿಗೆ ಆಯ್ಕೆ ಮಾಡುವಾಗ ಯಾವ ರೀತಿ ಆಟಗಾರ್ತಿಯರಿಂದ ‘ಸೇವೆ’ ಬಯಸುತ್ತಾರೆ ಎಂದು ಕಥೆ ಹೇಳಿದ ಅನೇಕರಿದ್ದಾರೆ.
ಒಟ್ಟಾರೆ, ಈ ಎಲ್ಲಾ ಪ್ರಕರಣಗಳು ಸೂಚಿಸುವುದು ಕ್ರೀಡೆಯಲ್ಲಿನ ವಿಶ್ವಾಸಘಾತ.
ರಾಷ್ಟ್ರೀಯ ಆಯ್ಕೆ ಟ್ರಯಲ್ಸ್ಗೆ ಕರೆದುಕೊಂಡು ಹೋಗುವ ನೆಪದಲ್ಲಿ ಉತ್ತರ ಪ್ರದೇಶದ ಅಪ್ರಾಪ್ತ ಖೋ-ಖೋ ಆಟಗಾರ್ತಿಯ ಮೇಲೆ ಗೋವಾದಲ್ಲಿ ಅತ್ಯಾಚಾರ ಎಸಗಿರುವ ಕೋಚ್ ಒಬ್ಬ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಇದು ಒಂದು ನಿದರ್ಶನ ಮಾತ್ರ. ಬೆಳಕಿಗೇ ಬರದ ಇಂಥ ಪ್ರಕರಣಗಳು ಅದೆಷ್ಟೋ ಇವೆ.
ಹುಡುಗಿಯರು ಸರ್ಕಾರಿ ಉದ್ಯೋಗ, ಉನ್ನತ ಶಿಕ್ಷಣಕ್ಕೆ ಕ್ರೀಡಾಕೋಟಾದಲ್ಲಿ ಸ್ಥಾನ ಇತ್ಯಾದಿ ಆಕರ್ಷಣೆಗಳಿಂದ ವಿವಿಧ ಕ್ರೀಡೆಗಳನ್ನು ಆಡುತ್ತಿರುತ್ತಾರೆ. ಪೋಷಕರ ಒತ್ತಾಸೆಯೂ ಇದಕ್ಕೆ ಇರುತ್ತದೆ. ಶಾಲಾ, ಕಾಲೇಜು ಮಟ್ಟದಲ್ಲಿ ವಿವಿಧ ರಾಜ್ಯ, ರಾಷ್ಟ್ರ ಮಟ್ಟದ ಟೂರ್ನಿಗಳಿಗಾಗಿ ದೂರದೂರದ ಊರುಗಳಿಗೆ ಹೋಗಬೇಕಾಗುತ್ತದೆ. ದುರಂತವೆಂದರೆಎಷ್ಟೋ ಬಾರಿ ರಾಷ್ಟ್ರ ಮಟ್ಟದ ಟೂರ್ನಿಗಳಿಗೆ ದೂರದ ರಾಜ್ಯಗಳಿಗೆ ವಾರಗಟ್ಟಲೆ ತೆರಳುವ ಬಾಲಕಿಯರ ತಂಡದ ಜೊತೆಗೆ ಓರ್ವ ಮಹಿಳಾ ಸಹಯೋಗಿಯೂ ಇರುವುದಿಲ್ಲ. ತಂಡದ ಕೋಚ್, ಮ್ಯಾನೇಜರ್ ಎಲ್ಲರೂ ಪುರುಷರೇ ಆಗಿರುತ್ತಾರೆ. ಕೆಲವು ಪ್ರಕರಣಗಳಲ್ಲಿ ತಂಡದೊಂದಿಗೆ ತೆರಳುವ ಅಧಿಕಾರಿಗಳು, ಕೋಚ್ಗಳಿಗೆ ಸಹಕರಿಸುವಂಥ ಮಹಿಳೆಯರನ್ನೇ ಕರೆದೊಯ್ಯಲಾಗುತ್ತದೆ ಎಂಬ ಆರೋಪಗಳೂ ಇವೆ.
ಕ್ರೀಡೆಯನ್ನು ಕಾಡುತ್ತಿರುವ ಉದ್ದೀಪನ ವ್ಯಸನದ ಬಗ್ಗೆ ಕೇಂದ್ರ ಕ್ರೀಡಾ ಸಚಿವಾಲಯವೇ ಗಮನ ಹರಿಸಿದೆ. ಕ್ರೀಡೆಗೆ ಮಾರಕವಾಗಿರುವ ಲೈಂಗಿಕ ಕಿರುಕುಳದ ಪ್ರಕರಣಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಲು ಇದು ಸಕಾಲ. ಪ್ರತೀ ಬಾರಿ ಪ್ರಕರಣವೊಂದು ಬಯಲಿಗೆ ಬಂದಾಗ ತನಿಖಾ ಸಮಿತಿ ರಚಿಸಿ ಹಗರಣ ಮುಚ್ಚಿಹಾಕುವ ಪ್ರವೃತ್ತಿಯಿಂದ ವ್ಯವಸ್ಥೆಗೆ ಒಳ್ಳೆಯದಲ್ಲ. ಜೊತೆಗೆ ಕೇವಲ ಆಟವಾಡಲು ಬಂದಿರುವ ಆಟಗಾರ್ತಿಯರು ಹಾಗೂ ಮಕ್ಕಳನ್ನು ಕಳಿಸುವ ಪೋಷಕರ ವಿಶ್ವಾಸಕ್ಕೆ ಆಗುವ ವಜ್ರಘಾತವನ್ನು ಒಲಿಂಪಿಕ್ಸ್ ಪದಕದಿಂದಲೂ ಸರಿಪಡಿಸಲು ಸಾಧ್ಯವಿಲ್ಲ.
ಬದುಕಿಗೆ ಬಂಗಾರದ ಬೆಲೆಯೇ ಹೊರತು ಬಂಗಾರದ ಪದಕದಿಂದ ಬದುಕಿನ ಬೆಲೆ ಕಟ್ಟಲು ಸಾಧ್ಯವಿಲ್ಲ.

ಪ್ರೀಜಾ ಶ್ರೀಧರನ್ ಸಂದರ್ಶನ


ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡ ಬಳಿಕ ಪ್ರೀಜಾ ಶ್ರೀಧರನ್ 2 ವರ್ಷ ಕಾಲ ಅಭ್ಯಾಸವನ್ನೇ ನಡೆಸಿರಲಿಲ್ಲ. ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡ ಮೇಲೆ ಅದಕ್ಕಿಂತ ದೊಡ್ಡ ಸಾಧನೆ ಇನ್ನೇನಿದೆ ಎಂಬ ಭಾವನೆಯೊಂದಿಗೆ ಅವರು ಸಂತೃಪ್ತಿ ಹೊಂದಿದ್ದರು. ಆದರೆ, 2010ರ ಡೆಲ್ಲಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸಾಧನೆ ಮಾಡುವಂತೆ ಅಮ್ಮ ಮತ್ತು ಅಣ್ಣ ಹುರಿದುಂಬಿಸಿದ್ದರ ಪರಿಣಾಮ ಪ್ರೀಜಾ ಟ್ರಾಕ್ಗೆ ಮರಳಿದ್ದರು.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಗೆಲ್ಲಲು ವಿಫಲವಾದಾಗ ಮತ್ತೆ ನಿರಾಸಕ್ತಿ ಪ್ರೀಜಾರನ್ನು ಕಾಡಿತ್ತು. ಇನ್ನು ಎಲ್ಲಿಗೂ ಓಡುವುದಿಲ್ಲ ಎಂಬ ಹತಾಶೆಯ ಹಂತವನ್ನು ಅವರು ತಲುಪಿದ್ದರು. ಆದರೆ, ಮತ್ತೆ ಕುಟುಂಬದವರು ಮತ್ತು ಕೋಚ್ಗಳು ಹಾಗೆ ಮಾಡದಂತೆ ತಡೆದರು. ಅದರ ಪರಿಣಾಮ ಒಂದೇ ತಿಂಗಳಲ್ಲಿ ಫಲ ಸಿಕ್ಕಿತ್ತು. ಚೀನಾದ ಗುವಾಂಗ್ಝೌನಲ್ಲಿ ನಡೆದ ಏಷ್ಯಾಡ್ನಲ್ಲಿ ಪ್ರೀಜಾ 10,000 ಮೀ. ಓಟದಲ್ಲಿ ಚಿನ್ನ, 5000ಮೀ. ಓಟದಲ್ಲಿ ಬೆಳ್ಳಿ ಗೆದ್ದು ಬೀಗಿದ್ದರು.
ಈಗ ಪ್ರೀಜಾ ಏಷ್ಯಾಡ್ನಲ್ಲಿ ಗೆದ್ದ ಚಿನ್ನವನ್ನು ಲಂಡನ್ ಒಲಿಂಪಿಕ್ಸ್ನಲ್ಲಿ ಪದಕವಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯೊಂದಿಗೆ ಶ್ರಮ ಪಡುತ್ತಿದ್ದಾರೆ. ಗುವಾಂಗ್ಝೌ ಏಷ್ಯಾಡ್ ಸಾಧನೆಗಾಗಿ ಅವರಿಗೆ ಭಾರತ ಸರ್ಕಾರದ ಮಹತ್ವದ ಕ್ರೀಡಾ ಪುರಸ್ಕಾರ ಅರ್ಜುನ ಪ್ರಶಸ್ತಿ ಲಭ್ಯವಾಗಿದೆ. ಆರ್ಥಿಕ ಹಿನ್ನೆಲೆಯಿಲ್ಲದೆ, ಪ್ರಾಯೋಜಕರಿಲ್ಲದೆ ಪರದಾಡುತ್ತಿದ್ದ ಕೇರಳದ ಹುಡುಗಿಯನ್ನು ಮಿತ್ತಲ್ ಚಾಂಪಿಯನ್ಸ್ ಟ್ರಸ್ಟ್ ಪ್ರಾಯೋಜಿಸುತ್ತಿದೆ. ಪ್ರೀಜಾ ತಮ್ಮ ಕನಸಿನ ಹಾದಿಯಲ್ಲಿ ಶರವೇಗದಲ್ಲಿ ಓಡುತ್ತಿದ್ದಾರೆ.
ಬೆಂಗಳೂರಿನ ಸಾಯ್ ದಕ್ಷಿಣ ಕೇಂದ್ರದಲ್ಲಿ ಒಲಿಂಪಿಕ್ಸ್ ತಯಾರಿನಲ್ಲಿ ಮಗ್ನರಾಗಿರುವ ಪ್ರೀಜಾ ಶ್ರೀಧರನ್ ಶನಿವಾರ ಅರ್ಜುನ ಪ್ರಶಸ್ತಿ, ತಮ್ಮ ವೃತ್ತಿಜೀವನ ಹಾಗೂ ಲಂಡನ್ ಪೂರ್ವ ತಯಾರಿಯ ಬಗ್ಗೆ ಉದಯವಾಣಿಯೊಂದಿಗೆ ಮಾತನಾಡಿದರು.
ಏಷ್ಯಾಡ್ನ ಸಾಧನೆ ಬಳಿಕ ಅರ್ಜುನ ಗೌರವವನ್ನು ನಾನು ನಿರೀಕ್ಷಿಸಿದ್ದೆ. ಬಹಳ ಸಂತೋಷವಾಗಿದೆ. ಈ ಪ್ರಶಸ್ತಿ ಇನ್ನೂ ದೊಡ್ಡ ಸಾಧನೆಗಳಿಗೆ ಪ್ರೇರಣೆ ಒದಗಿಸಲಿದೆ ಎಂದು ಪ್ರೀಜಾ ಖುಷಿಯಿಂದ ಹೇಳಿಕೊಂಡರು.
ನನ್ನ ಈ ಸಾಧನೆಯ ಎಲ್ಲಾ ಶ್ರೇಯ ನನ್ನ ಅಮ್ಮ, ಅಣ್ಣ ಪ್ರದೀಪ್ ಮತ್ತು ಕೋಚ್ಗಳಿಗೆ ಸಲ್ಲಬೇಕು. ನಿನ್ನೆ ರಾತ್ರಿ ಮನೆಯವರೊಂದಿಗೆ ಮಾತನಾಡಿದೆ. ಅವರೆಲ್ಲರಿಗೂ ಅತ್ಯಾನಂದವಾಗಿತ್ತು. ಟಿವಿಯಲ್ಲಿ ನಿನ್ನ ಸುದ್ದಿಯನ್ನೇ ನೋಡುತ್ತಿದ್ದೇವೆ ಎಂದು ಹೇಳಿಕೊಂಡು ಸಂಭ್ರಮ ಪಟ್ಟರು ಎಂದು ಪ್ರೀಜಾ ಹೇಳಿಕೊಂಡರು.
ಪ್ರೀಜಾ ಏಷ್ಯಾಡ್ನಲ್ಲಿ ಚಿನ್ನ ಗೆದ್ದ ಸಂದರ್ಭದಲ್ಲೂ ಮೊದಲಿಗೆ ಅಮ್ಮ ಮತ್ತು ಅಣ್ಣನನ್ನು ನೆನಪಿಸಿಕೊಂಡಿದ್ದರು. ಬಡತನದ ಬೆಂಕಿಯಲ್ಲಿ ಅರಳಿದ ಹೂವು ಪ್ರೀಜಾ ಹಾಗೆ ಮಾಡುವುದು ಸಹಜವೂ ಆಗಿತ್ತು. ಕೇರಳದ ಇಡುಕ್ಕಿ ಜಿಲ್ಲೆಯ ಮಲ್ಲಕ್ಕಾನಂ ಹಳ್ಳಿಯ ಹುಡುಗಿ ಪ್ರೀಜಾ 4ನೇ ವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡಿದ್ದರು. ಆಗಿನಿಂದಲೂ ಅಮ್ಮ ರಮಣಿ ಶ್ರೀಧರನ್ ಅವರೇ ಮನೆಗೆಲಸ ಮಾಡಿ ಮಕ್ಕಳನ್ನು ಸಾಕಿದ್ದರು. ಪ್ರೀಜಾ ಅಣ್ಣ ಪ್ರದೀಪ್ 8ನೇ ತರಗತಿಯಲ್ಲೇ ಶಾಲೆ ತೊರೆದು ಕಾರ್ಪೆಂಟರ್ ಕೆಲಸಕ್ಕೆ ಸೇರುವ ಮೂಲಕ ಕುಟುಂಬಕ್ಕೆ ನೆರವಾಗುತ್ತಿದ್ದರು. ಆದರೆ ಆ ಕಷ್ಟದ ದಿನಗಳಲ್ಲೂ ಪ್ರೀಜಾರ ಓಡುವ ಆಸಕ್ತಿಗೆ ಅವರು ನೀರೆರೆದಿದ್ದರು.
ಶಾಲಾ ದಿನಗಳಲ್ಲಿ ಅಥ್ಲೆಟಿಕ್ಸ್ ಕೋಚ್ ರಣೇಂದ್ರ ಅವರ ಮನೆಯಲ್ಲೇ ಇದ್ದುಕೊಂಡು ಅಭ್ಯಾಸ ನಡೆಸಿದ್ದ ಪ್ರೀಜಾ, ಪಾಲಂನಲ್ಲಿ ಆಲ್ಫಾನ್ಸೋ ಕಾಲೇಜು ಸೇರಿದ ಮೇಲೆ ಥಂಕಚ್ಚನ್ ಮ್ಯಾಥ್ಯೂ ಅವರಿಂದ ನೆರವು ಪಡೆದಿದ್ದರು.
ಕೊನೆಗೂ ಪ್ರೀಜಾಗೆ ರೈಲ್ವೇ ಉದ್ಯೋಗ ದೊರಕಿದ ಮೇಲೆ ಅವರು ಕುಟುಂಬ ನೆಲೆ ಕಂಡುಕೊಂಡಿತು. ರೈಲ್ವೇಯಲ್ಲಿ ಕೆಲಸ ಸಿಕ್ಕಿದ್ದುನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ ಎಂದು ಪ್ರೀಜಾ ಈಗಲೂ ಹೇಳುತ್ತಾರೆ.
ಪ್ರೀಜಾ ಕಳೆದ ವರ್ಷ ಏಷ್ಯಾಡ್ನಲ್ಲಿ 10,000ಮೀ. ಓಟವನ್ನು 31 ನಿಮಿಷ 50.28ಸೆಕೆಂಡ್ಗಳಲ್ಲಿ ಕ್ರಮಿಸುವ ಮೂಲಕ ಚಿನ್ನ ಗೆದ್ದಿದ್ದರು. ಇದು ರಾಷ್ಟ್ರೀಯ ದಾಖಲೆಯೂ ಹೌದು. ಹಾಗೆ ನೋಡಿದರೆ 5000 ಮೀ. ಮತ್ತು 10,000 ಮೀ. ಓಟಗಳೆರಡರಲ್ಲೂ ರಾಷ್ಟ್ರೀಯ ದಾಖಲೆ ಪ್ರೀಜಾ ಹೆಸರಲ್ಲೇ ಇದೆ. ಮುಂದಿನ ವರ್ಷದ ಲಂಡನ್ ಒಲಿಂಪಿಕ್ಸ್ಗೆ ‘ಎ’ ಶ್ರೇಣಿಯ ಅರ್ಹತೆ ಗಳಿಸಲು ಪ್ರೀಜಾ ಗುವಾಂಗ್ಝೌನಲ್ಲಿ ದಾಖಲಿಸಿದ ಅವಧಿಯನ್ನು ಪುನರಾವರ್ತಿಸಿದರೆ ಸಾಕು. ಅವರಿಂದ ಅದು ಸಾಧ್ಯವೂ ಹೌದು. ಮುಂದಿನ ತಿಂಗಳು ಕೊರಿಯಾದಲ್ಲಿ ನಡೆಯುವ ವಿಶ್ವ ಚಾಂಪಿಯನ್ಷಿಪ್ನಲ್ಲೇ ಈ ಸಾಧನೆ ಮಾಡಿ ಲಂಡನ್ಗೆ ಟಿಕೆಟ್ ಬುಕ್ ಮಾಡುವ ವಿಶ್ವಾಸವನ್ನು ಪ್ರೀಜಾ ಹೊಂದಿದ್ದಾರೆ.
ಒಲಿಂಪಿಕ್ಸ್ನಲ್ಲಿ ಪದಕದ ಕನಸು ಕಾಣಲು 10,000ಮೀ. ಓಟವನ್ನು ಕನಿಷ್ಠ 29 ಪ್ಲಸ್ ನಿಮಿಷದಲ್ಲಿ ಓಡಬೇಕು. ಇನ್ನೂ ಒಂದು ವರ್ಷದಲ್ಲಿ ಆ ವೇಗ ರೂಢಿಸಿಕೊಳ್ಳಲು ಶತ ಪ್ರಯತ್ನ ಮಾಡುವುದಾಗಿ ಪ್ರೀಜಾ ಹೇಳುತ್ತಾರೆ.
ಮಿತ್ತಲ್ ಸಹಕಾರ: ಪ್ರೀಜಾ ವೃತ್ತಿಜೀವನದ ಆರಂಭದ ದಿನಗಳಲ್ಲಿ ಪ್ರಾಯೋಜಕರ ಬೆಂಬಲವಿಲ್ಲದೆ ತಾಪತ್ರಯ ಅನುಭವಿಸಿದ್ದರು. ಆದರೆ, ಈಗ ಮಿತ್ತಲ್ ಚಾಂಪಿಯನ್ಸ್ ಟ್ರಸ್ಟ್ ಅವರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದು, ಅವರ ಒಲಿಂಪಿಕ್ಸ್ ತಯಾರಿಯ ಪೂರ್ಣ ವೆಚ್ಚವನ್ನು ಅದು ಭರಿಸಲಿದೆ.
ಲಕ್ಷ್ಮೀ ಮಿತ್ತಲ್ ಹಾಗೂ ಅಮಿತ್ ಭಾಟಿಯಾ ಮಹತ್ವಾಕಾಂಕ್ಷೆಯ ಮಿತ್ತಲ್ ಚಾಂಪಿಯನ್ಸ್ ಟ್ರಸ್ಟ್ ಸ್ಥಾಪನೆಗೊಂಡಿದ್ದೇ 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಪದಕ ವಿಜೇತರನ್ನು ರೂಪಿಸುವ ಕನಸಿನಿಂದ. ಆರ್ಚರಿ, ಕುಸ್ತಿ, ಶೂಟಿಂಗ್, ಅಥ್ಲೆಟಿಕ್ಸ್ ಮತ್ತು ಬಾಕ್ಸಿಂಗ್ನಲ್ಲಿ ಅನೇಕ ಪ್ರತಿಭಾವಂತರು ಸದ್ಯ ಎಂಸಿಟಿ ನೆರವಿನಿಂದ ಒಲಿಂಪಿಕ್ಸ್ ಪದಕದ ಕನಸು ಕಾಣುತ್ತಿದ್ದಾರೆ. ಅಭಿನವ್ ಬಿಂದ್ರಾ ಒಲಿಂಪಿಕ್ಸ್ ಸ್ವರ್ಣ ಗೆದ್ದ ಮಿತ್ತಲ್ ಟ್ರಸ್ಟ್ ಪ್ರಾಯೋಜನೆಯ ಮೊದಲ ಚಾಂಪಿಯನ್. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಎಂಸಿಟಿ ಪ್ರಾಯೋಜಿತ ಅಥ್ಲೀಟ್ಗಳು 7 ಚಿನ್ನ, 7 ಬೆಳ್ಳಿ, 2ಕಂಚು, ಏಷ್ಯಾಡ್ನಲ್ಲಿ 3 ಚಿನ್ನ, 5 ಬೆಳ್ಳಿ, 8 ಕಂಚು ಗೆದ್ದಿದ್ದರು. ಈಗ ಪ್ರೀಜಾ ಎಂಸಿಟಿ ಪತಾಕೆಯನ್ನು ಲಂಡನ್ನಲ್ಲಿ ಹಾರಿಸಲು ತರಬೇತಿ ನಡೆಸಿದ್ದಾರೆ.
ಭಾರತೀಯ ಅಥ್ಲೆಟಿಕ್ಸ್ಗೆ ಸದ್ಯ ಕಳಂಕ ತಂದಿರುವ ಉದ್ದೀಪನ ಕಳಂಕದ ಬಗ್ಗೆ ಪ್ರೀಜಾ ಪ್ರತಿಕ್ರಿಯಿಸಲು ಇಷ್ಟ ಪಡುವುದಿಲ್ಲ. ಎಲ್ಲವೂ ಅಯೋಮಯವಾಗಿದೆ. ಅದೆಲ್ಲಾ ಹೇಗಾಯಿತೆಂದೇ ಗೊತ್ತಾಗುತ್ತಿಲ್ಲ ಎಂದು ಪ್ರೀಜಾ ಹೇಳಿಕೊಂಡರು.
ಕಳೆದ ವರ್ಷ ಏಷ್ಯಾಡ್ನಲ್ಲಿ ಪ್ರೀಜಾ ಗೆದ್ದ ಬಂಗಾರದ ಪದಕಕ್ಕೆ ಕೇಂದ್ರ ಸರ್ಕಾರ 10 ಲಕ್ಷ ರೂ. ನಗದು ಬಹುಮಾನ ನೀಡಿತ್ತು. ಆ ಹಣದಲ್ಲಿ ಪ್ರೀಜಾ ಪಾಲಕ್ಕಾಡ್ನ ಅಕ್ಕಥೇಥರಾದಲ್ಲಿ ಹೊಸದೊಂದು ಮನೆ ಕಟ್ಟಿಸುತ್ತಿದ್ದಾರೆ. ಮುಂದಿನ ತಿಂಗಳು ಗೃಹಪ್ರವೇಶ ನಡೆಯುವ ನಿರೀಕ್ಷೆ ಇದೆ. ನಿನಗೆ ಮದುವೆಯ ವಯಸ್ಸಾಯಿತು ಎಂದು ಅಮ್ಮ ರಮಣಿ ಒತ್ತಾಯ ಮಾಡಲಾರಂಭಿಸಿದ್ದಾರೆ. ಆದರೆ, ಸೂಕ್ತ ಹುಡುಗ ಇನ್ನೂ ಸಿಕ್ಕಿಲ್ಲ. ಅಷ್ಟಕ್ಕೂ ಅಮ್ಮ ಹುಡುಗನನ್ನು ಹುಡುಕಿದರೂ ಆತನನ್ನು ನೋಡಲು ನಾನು ಮನೆಯಲ್ಲಿರುವುದಿಲ್ಲ ಎಂದು ಪ್ರೀಜಾ ಹೇಳಿಕೊಳ್ಳುತ್ತಾರೆ.
ಸದ್ಯಕ್ಕಂತೂ ಪ್ರೀಜಾ ಗಮನವೆಲ್ಲಾ ಒಲಿಂಪಿಕ್ಸ್ ಮೇಲೆ. ಬೆಳಗ್ಗೆ , ಸಂಜೆ ತಲಾ 25 ಕಿಮೀಗಳಂತೆ ದಿನಂಪ್ರತಿ 50ಕಿಮೀ ಓಡುತ್ತಿರುವ ಪ್ರೀಜಾ ದೊಡ್ಡ ಗುರಿಯ ಕಡೆಗೆ ಚಿರತೆ ವೇಗದಲ್ಲಿ ಸಾಗುತ್ತಿದ್ದಾರೆ.

ಪ್ರೀಜಾ ಸಾಧನೆ
1998: ತಂಡ ಬೆಳ್ಳಿ - ಏಷ್ಯಾ ಗುಡ್ಡಗಾಡು ಓಟ, ಹಾಂಕಾಂಗ್
2000: 5000 ಮೀ ಚಿನ್ನ, 10,000ಮೀ. ಬೆಳ್ಳಿ- ಎಸ್ಎಎಫ್ ಗೇಮ್ಸ್
2004: ಚಿನ್ನ, ಏಷ್ಯಾ ಒಳಾಂಗಣ ಕೂಟ, ಟೆಹ್ರಾನ್
2006: 5000ಮೀ. ಬೆಳ್ಳಿ, ಏಷ್ಯನ್ ಅಥ್ಲೆಟಿಕ್ಸ್, ಜೋರ್ಡಾನ್
2008: ಒಲಿಂಪಿಕ್ಸ್ನ 10,000ಮೀ. ಓಟದಲ್ಲಿ ಭಾರತ ಪ್ರತಿನಿಧಿಸಿದ ಮೊದಲ ಮಹಿಳೆ ಎಂಬಶ್ರೇಯ.
2010: 10,000ಮೀ. ಚಿನ್ನ, 5000ಮೀ. ಬೆಳ್ಳಿ, ಗುವಾಂಗ್ಝೌ ಏಷ್ಯಾಡ್

Tuesday, June 21, 2011

ನಂಬಿ ಕೆಟ್ಟವರಿಲ್ಲವೋ...


ಸಚಿನ್ ತೆಂಡುಲ್ಕರ್ ಭಾರತೀಯ ಕ್ರಿಕೆಟ್ನ ಮುಖವಾದರೆ, ರಾಹುಲ್ ದ್ರಾವಿಡ್ ಬೆನ್ನೆಲುಬು. ಇದನ್ನು ನಾನಾ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಹುದು.
ಬಹುಶಃ ರಾಹುಲ್ ದ್ರಾವಿಡ್ ಇಂಗ್ಲೆಂಡ್ನಲ್ಲೋ, ವೆಸ್ಟ್ ಇಂಡೀಸ್ನಲ್ಲೋ ಜನಿಸಿದ್ದರೆ ಈ ಹೊತ್ತಿಗೆ ಆ ರಾಷ್ಟ್ರದ ಸರ್ವಶ್ರೇಷ್ಠ ಕ್ರಿಕೆಟಿಗ ಎನಿಸಿಕೊಳ್ಳುತ್ತಿದ್ದರು ಅಥವಾ ಭಾರತದಲ್ಲೇ ಸಚಿನ್ ತೆಂಡುಲ್ಕರ್ ಸಮಕಾಲೀನರೆನಿಸದೆ ಬೇರೊಂದು ಕಾಲಘಟ್ಟದಲ್ಲಿ ಜನಿಸಿದ್ದರೆ ಅವರ ಸಾಧನೆಗಳಿಗೆ ಇನ್ನೂ ಹೆಚ್ಚಿನ ಮಹತ್ವ ಸಿಕ್ಕಿರುತ್ತಿತ್ತು.
ಯಶಸ್ಸೆಂಬ ಗಗನಚುಂಬಿ ಕಟ್ಟಡದ ತುತ್ತತುದಿಗೆ ಸಚಿನ್ ಲಿಫ್ಟ್ ಏರಿಕೊಂಡು ಶರವೇಗದಲ್ಲಿ ಏರಿದರೆ, ದ್ರಾವಿಡ್ ಒಂದೊಂದೇ ಮೆಟ್ಟಿಲು ಕ್ರಮಿಸಿಕೊಂಡು ಸ್ಥಿರವಾಗಿ ಏರಿದರು.
ದ್ರಾವಿಡ್ ಎಂದೊಡನೆ ಕಣ್ಮುಂದೆ ಸುಳಿಯುವುದು ಅವರ ಸದ್ವರ್ತನೆ, ಸೌಜನ್ಯ, ವಿಧೇಯತೆ ಮತ್ತು ಸರಳತೆ. ಅವರು ಸ್ಟೈಲಿಷ್ ಆಗಿದ್ದರೂ ಶೋಕಿಲಾಲರಲ್ಲ. ವಾಗ್ಮಿಯಾಗಿದ್ದರೂ ವಾಚಾಳಿಯಲ್ಲ. ಶಿಸ್ತಿನ ವ್ಯಕ್ತಿಯಾಗಿದ್ದರೂ ಸಿಡುಕನಲ್ಲ. ತಾಂತ್ರಿಕವಾಗಿ ಪರಿಪೂರ್ಣ ಆಟಗಾರನೆನಿಸಿದ್ದರೂ ಅಷ್ಟಕ್ಕೇ ಸೀಮಿತಗೊಂಡವರಲ್ಲ. ಅನುಭವ ಶ್ರೀಮಂತನಾದರೂ ಮೈಮರೆತವರಲ್ಲ. ದ್ರಾವಿಡ್ ಎಂದರೆ ಪರಿಪೂರ್ಣತೆಗೆ ಹತ್ತಿರ ದಲ್ಲಿರುವ, ಇನ್ನೂ ಪ್ರಕ್ರಿಯೆಯಲ್ಲಿರುವ ಒಂದು ಕಲಾಕೃತಿ. ಅವರಿಗೆ ನಿರಂತರವಾಗಿ ಯಶಸ್ಸಿನ ಹಸಿವು, ಸಾಧನೆಯ ದಾಹ, ಎತ್ತರಕ್ಕೇರುವ ತುಡಿತ. ಕ್ರಿಕೆಟ್ ಮೈದಾನದಲ್ಲಿ ಅವರೊಬ್ಬ ಸದಾ ಅನ್ವೇಷಣಶೀಲ ವಿಜ್ಞಾನಿ. ಏರಿಳಿತಗಳಿಂದ ವಿಚಲಿತಗೊಳ್ಳದ ತತ್ವಜ್ಞಾನಿ. ಆದರೆ, ಅವರ ಪ್ರಕಾರ ಶಾಶ್ವತ ವಿದ್ಯಾರ್ಥಿ. ಅವರ ವೃತ್ತಿಜೀವನ ಒಂದು ಸುದೀರ್ಘ ಕಲಿಕೆಯ ಅಭಿಯಾನ. ಒಂದೊಂದು ಪಂದ್ಯವೂ ಅವರಿಗೆ ಒಂದೊಂದು ಪರೀಕ್ಷೆ. ಪ್ರತೀ ಪರೀಕ್ಷೆಯಲ್ಲೂ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಬದ್ಧತೆ, ಪ್ರಯತ್ನಶೀಲತೆ, ಛಲ ಅವರಲ್ಲಿ. ಅದೇ ದ್ರಾವಿಡ್ ಹಿರಿಮೆ.
ಎಷ್ಟೋ ಬಾರಿ ಕ್ರಿಕೆಟಿಗನ ಶ್ರೇಷ್ಠತೆಯನ್ನು ಕೇವಲ ಅಂಕಿ ಅಂಶದಿಂದ ಅಳೆಯಲು ಸಾಧ್ಯವಾಗುವುದಿಲ್ಲ. ದ್ರಾವಿಡ್ ವಿಷಯದಲ್ಲೂ ಅಷ್ಟೇ. ಕ್ರಿಕೆಟ್ನಲ್ಲಿ ಹರ್ಭಜನ್ ಸಿಂಗ್ ಸಹ ಎರಡು ಶತಕ ಬಾರಿಸಿದ್ದಾರೆ. ಲಕ್ಷ್ಮೀಪತಿ ಬಾಲಾಜಿಯಂಥವರು ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಹಾಗೆಂದು ಅದೆಲ್ಲಾ ಅವರ ಬ್ಯಾಟಿಂಗ್ ಪ್ರೌಢಿಮೆಗಿಂತ ಅದೃಷ್ಟದ ಫಲ. ಮುಟ್ಟಿದ್ದೆಲ್ಲಾ ಚಿನ್ನವಾಗುವಂಥ ಎಂದೋ ಒಂದು ದಿನ ಹರ್ಭಜನ್ ಕಣ್ಣು ಮುಚ್ಚಿಕೊಂಡು ಹೊಡೆದರೂ ಔಟಾಗುವುದಿಲ್ಲ. ಬ್ಯಾಟ್ ತಾಗಿದರೆ ಸಾಕು ಚೆಂಡು ಬೌಂಡರಿಯತ್ತ ಓಡುತ್ತದೆ. ಆದರೆ, ದ್ರಾವಿಡ್ ವೃತ್ತಿಜೀವನದಲ್ಲಿ ಇಂಥ ಬಿಟ್ಟಿ ರನ್ಗಳಿಲ್ಲ. ಸೆಹ್ವಾಗ್ರಂತೆ ಎಡ್ಜ್ ಆಗಿ ಕ್ಯಾಚ್ ಆಗಬೇಕಾದ ಚೆಂಡು ಬೌಂಡರಿ, ಸಿಕ್ಸರ್ ಆದ ಉದಾಹರಣೆ ದ್ರಾವಿಡ್ ಬ್ಯಾಟಿಂಗ್ನಲ್ಲಿ ಕಾಣಸಿಗುವುದಿಲ್ಲ. ಅಂದರೆ, ಅವರು ಗಳಿಸುವ ಒಂದೊಂದು ರನ್ನಿನಲ್ಲೂ ಅವರ ಪ್ರಯತ್ನವಿರುತ್ತದೆ. ಪ್ರತಿಭೆ, ಯೋಗ್ಯತೆ, ಅಭ್ಯಾಸ, ಸಿದ್ಧಿ ಕಾಣುತ್ತದೆ. ಹೊಸದಾಗಿ ಕ್ರಿಕೆಟ್ ಕಲಿಯುವವರು ಟೆಸ್ಟ್ ಪಂದ್ಯಗಳಲ್ಲಿ ದ್ರಾವಿಡ್ ಬ್ಯಾಟಿಂಗ್ ಮಾಡುವುದನ್ನು ನೋಡಿದರೆ ಸಾಕು. ಕ್ರೀಸ್ನಲ್ಲಿ ನಿಲುವಿನಿಂದ ಬ್ಯಾಟ್ ಹಿಡಿಯುವ ರೀತಿಯಿಂದ, ಚೆಂಡನ್ನು ನೋಡುವ, ಗ್ರಹಿಸುವ, ಮೌಲ್ಯಕ್ಕೆ ತಕ್ಕಂತೆ ಆಡುವ ಒಂದೊಂದು ಅಂಶವೂ ಒಂದೊಂದು ಪಾಠ. ಚೆಂಡಿರುವುದೇ ಚಚ್ಚುವುದಕ್ಕೆ ಎನ್ನುವ ಇಂದಿನ ಟಿ20 ಯುಗದಲ್ಲಿ ಶ್ರೇಷ್ಠ ಎಸೆತಗಳ ವಿರುದ್ಧ ಯಾವ ಯಾವ ರೀತಿ ರಕ್ಷಣಾತ್ಮಕವಾಗಿ ಆಡಬಹುದು, ಯಾವ ರೀತಿ ಆಕ್ರಮಣ ನಡೆಸಬಹುದು ಎಂಬುದನ್ನು ದ್ರಾವಿಡ್ ಆಟ ನೋಡಿ ಕಲಿಯಬಹುದು.
ದ್ರಾವಿಡ್ರ ವಿಶೇಷತೆಯೆಂದರೆ ಅವರು ಯಾವತ್ತೂ ತಮ್ಮ ಆಟ ನಿಂತ ನೀರಾಗಲು ಅವಕಾಶ ಕೊಡಲಿಲ್ಲ. ಒಂದು ಚೌಕಟ್ಟಿನೊಳಗೆ ಬಂಧಿಯಾಗಲಿಲ್ಲ. ಕೇವಲ ಟೆಸ್ಟ್ ಆಟಗಾರ ಎಂದು ಬ್ರಾಂಡ್ ಆಗಲಿಲ್ಲ. ಬರೀ ಬ್ಯಾಟ್ಸ್ಮನ್ ಆಗಿಯೂ ಉಳಿಯಲಿಲ್ಲ. ಏಕದಿನ ಹಾಗೂ ಟಿ20 ಕ್ರಿಕೆಟ್ನಲ್ಲಿ ಬ್ಯಾಟ್ಸ್ ುನ್ ಆಗಿ ಅವರ ರೂಪಾಂತರ, ಸ್ಲಿಪ್ ಫೀಲ್ಡರ್ ಆಗಿ ಸಾಧಿಸಿದ ತಜ್ಞತೆ, ವಿಕೆಟ್ಕೀಪರ್ ಆಗಿ ಪ್ರದರ್ಶಿಸಿದ ಉಪಯುಕ್ತತೆ ಎಲ್ಲವೂ ಭವಿಷ್ಯದ ಪೀಳಿಗೆಗೆ ಒಂದೊಂದು ಪಾಠ.
ಕಳೆದ ಹದಿನೈದು ವರ್ಷಗಳಲ್ಲಿ ಭಾರತದ ಅನೇಕ ಐತಿಹಾಸಿಕ ಸಾಧನೆಗಳ ಸಂದರ್ಭದಲ್ಲಿ ದ್ರಾವಿಡ್ ಕೊಡುಗೆಯೂ ಇದೆ. ಕೋಲ್ಕತ್ತದ ಐತಿಹಾಸಿಕ ಟೆಸ್ಟ್ನಿಂದ ಆಸ್ಟ್ರೇಲಿಯಾದಲ್ಲಿನ ದಿಗ್ವಿಜಯದವರೆಗೆ, ದಕ್ಷಿಣ ಆಫ್ರಿಕಾದಲ್ಲಿನ ಸಾಹಸದಿಂದ ನ್ಯೂಜಿಲೆಂಡ್ನಲ್ಲಿ ಸತತ ಶತಕ ಪರಾಕ್ರಮದವರೆಗೆ, ಪಾಕಿಸ್ತಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್ನಲ್ಲಿ ಸರಣಿ ವಿಜಯದವರೆಗೆ ಎಲ್ಲೆಡೆ ಭಾರತದ ಎಲ್ಲಾ ಮಹತ್ವದ ಸಾಧನೆಗಳಲ್ಲಿ ದ್ರಾವಿಡ್ ಕೊಡುಗೆಯೂ ಇದೆ. ತೆಂಡುಲ್ಕರ್, ಲಕ್ಷ್ಮಣ್, ಗಂಗೂಲಿ, ಕುಂಬ್ಳೆಯ ಮಹೋನ್ನತ ಸಾಹಸದ ದಿನಗಳಲ್ಲಿ ದ್ರಾವಿಡ್ ಸಹ ಕೊಡುಗೆ ಸಲ್ಲಿಸಿದ್ದಾರೆ. ತಂಡದಲ್ಲಿ ಎಲ್ಲರೂ ಭರ್ಜರಿ ಫಾರ್ಮ್ ನಲ್ಲಿರುವಾಗ ಶತಕ, ಅರ್ಧ ಶತಕ ಬಾರಿಸುವುದು ದೊಡ್ಡ ವಿಚಾರವೇನಲ್ಲ. ಆದರೆ, ದ್ರಾವಿಡ್ ಎಲ್ಲರೂ ವಿಫಲರಾದ ದಿನಗಳಲ್ಲೂ ತಾವೊಬ್ಬರೇ ಏಕಾಂಗಿಯಾಗಿ ಹೋರಾಡಿದ್ದಾರೆ. ಅಂಥ ಅನೇಕ ಪಂದ್ಯಗಳನ್ನು ಗೆಲ್ಲಿಸಿದ್ದಾರೆ ಅಥವಾ ಸಂಪೂರ್ಣ ಶರಣಾಗತಿ ತಪ್ಪಿಸಿ ಮರ್ಯಾದೆ ಉಳಿಸಿದ್ದಾರೆ. ಮಿ. ಡಿಪೆಂಡಬಲ್ ಎಂಬ ಹೊಗಳಿಕೆ ಅವರಿಗೆ ಸುಮ್ಮನೆ ಬಂದಿದ್ದಲ್ಲ.
ದ್ರಾವಿಡ್ ಯಶಸ್ಸಿಗೆ ಸ್ವರ್ಣ ತೂಕ ಏಕೆಂದರೆ ಅವರಿಗೆ ಯಾವತ್ತೂ ಸಾಧನೆಯ ಪಿತ್ಥ ನೆತ್ತಿಗೇರಲಿಲ್ಲ. ತಮ್ಮ ಬೇರುಗಳನ್ನು ಅವರು ಮರೆಯಲಿಲ್ಲ. ಆವೇಶದ ಕೈಗೆ ವಿವೇಚನೆಯನ್ನು, ಆತುರದ ಕೈಗೆ ವಿವೇಕವನ್ನು ಅವರು ಯಾವತ್ತೂ ಕೊಡಲಿಲ್ಲ. ಸುದೀರ್ಘ ವೃತ್ತಿಜೀವನದಲ್ಲಿ ಯಾವತ್ತೂ ಯಾವುದೇ ವಿವಾದಗಳಿಗೆ ಸಿಲುಕಿಕೊಳ್ಳಲಿಲ್ಲ. ಚೆಂಡು ವಿರೂಪದಂಥ ಆರೋಪವನ್ನು ಅವರ ತಲೆಗೆ ಕಟ್ಟಲಾದ ಸಂದರ್ಭದಲ್ಲೂ ಅವರು ಅಮಾಯಕರಾಗಿದ್ದರೆ ವಿನಃ ಉದ್ದೇಶಪೂರ್ವಕವಾಗಿ ಆ ರೀತಿ ಮಾಡಿರಲಿಲ್ಲ. ಮಾತಿನಲ್ಲಾಗಲೀ, ಕೃತಿಯಲ್ಲಾಗಲೀ ಅವರು ಎಲ್ಲೆ ಮೀರಲಿಲ್ಲ. ಕ್ರಿಕೆಟ್ನಿಂದ ಅವರು ಗಣ್ಯರಾದಷ್ಟೇ ಕ್ರಿಕೆಟ್ಗೂ ಘನತೆ ತಂದುಕೊಟ್ಟಿದ್ದು ಅವರ ಹಿರಿಮೆ.

Thursday, May 12, 2011

ಕುಣಿಯೆ ಕುಣಿಯೆ ಚಿಯರುಲತೆ


ನೃತ್ಯವನ್ನು ನೋಡು, ನರ್ತಿಸುವವಳನ್ನಲ್ಲ ಎಂಬ ಮಾತೊಂದಿತ್ತು... ಅದೀಗ ತಿರುವುಮುರುವಾಗಿದೆ!
ನೃತ್ಯವೆನ್ನುವುದು ಹೆಜ್ಜೆಗಳು ಸೃಷ್ಟಿಸುವ ಕಾವ್ಯ ಎಂದೊಬ್ಬರು ಮಹಾನುಭಾವ ಹೇಳಿದ್ದರು. ಆದರೆ ನಮ್ಮ ಕವಿಗಳು ಕಾವ್ಯವನ್ನು ಕನ್ನಿಕೆ ಎಂದು ಕರೆದರು. ಕನ್ನಿಕೆಯನ್ನು ಕಾವ್ಯಮಯವಾಗಿ ಬಣ್ಣಿಸಿದರು. ಹೆಣ್ಣಿನ ಅಂಕು, ಡೊಂಕು, ಬಾಗು, ಬಳುಕು, ಲಾಸ್ಯ, ಹಾಸ್ಯ, ಮೊಗ, ನಗು ಕಾವ್ಯಭಾಷೆಯಲ್ಲಿ ಅಮರತ್ವ ಪಡೆದವು. ಕಾವ್ಯದಿಂದ ಹೆಣ್ಣು ಸುಂದರಿಯಾದಳು. ಕಾವ್ಯದ ಕಣ್ಣಲ್ಲಿ ಜನ ಸೌಂದರ್ಯವನ್ನು ಹುಡುಕಿದರು. ಸುಂದರಿಯರಲ್ಲಿ ಕಾವ್ಯವನ್ನು ಹುಡುಕಿದರು.ಯರ್ಗರ್ಲ್ಸ್ ಎಂಬ ಕಾವ್ಯ ಸೂರ್ತಿ ಹುಟ್ಟಿಸುವ ಕನ್ನಿಕೆಯರ ಸಲುವಾಗಿ ಇಷ್ಟೆಲ್ಲಾ ಹೇಳಬೇಕಾಯಿತು. ಚಿಯರ್ಲೀಡಿಂಗ್ ಎಂಬ ಪರಿಕಲ್ಪನೆ ಹಾಗೂ ಚಿಯರ್ಲೀಡರ್ಸ್ ಎಂಬ ಗಂಧರ್ವ ಬೆಡಗಿಯರು ಭಾರತಕ್ಕೆ ಕಾಲಿಟ್ಟಿದ್ದು ಐಪಿಎಲ್ ಮೂಲಕ. ಬಾರ್, ನೈಟ್ಕ್ಲಬ್ಗಳಲ್ಲಿ ಹುಡುಗಿಯರು ನರ್ತಿಸುವುದನ್ನು ನಿಷೇಸುವ ನಮ್ಮ ದೇಶದಲ್ಲಿ ಕ್ರಿಕೆಟ್ ಮೈದಾನದಲ್ಲಿ ಪರಂಗಿ ಹುಡುಗಿಯರು ಅರೆಬೆತ್ತಲೆ ಕುಣಿಯಲು ಅವಕಾಶವಾಗಿದ್ದಾದರೂ ಹೇಗೆ ಎನ್ನುವುದು ಮತ್ತೊಂದು ವಿಚಾರ. ಆದರೆ, ನಮ್ಮ ಚಲನಚಿತ್ರಗಳಲ್ಲಿ ಐಟಂ ಸಾಂಗ್ ಇರುವಂತೆ, ಇವರನ್ನೂ ಕ್ರಿಕೆಟ್ ಮೈದಾನದ ಐಟಂ ಹುಡುಗಿಯರು ಎನ್ನಲಡ್ಡಿಯಿಲ್ಲ.ಯರ್ಲೀಡರ್ಸ್ ಪರಿಕಲ್ಪನೆ ಭಾರತಕ್ಕೆ ಹೊಸದೇನೂ ಅಲ್ಲ. ಏಕೆಂದರೆ ಪ್ರಜಾಪ್ರಭುತ್ವ ಬರುವುದಕ್ಕೆ ಮುನ್ನ ಎಲ್ಲಾ ರಾಜ-ಮಹಾರಾಜರ ಆಸ್ಥಾನಗಳಲ್ಲಿ ರಾಜನರ್ತಕಿಯರಿರುತ್ತಿದ್ದರು. ಹಾಗೆ ನೋಡಿದರೆ ಚಿಯರ್ಲೀಡರ್ಗಳನ್ನು ಪೋಷಿಸಿದ ಮೊಟ್ಟಮೊದಲ ವ್ಯಕ್ತಿ ದೇವೇಂದ್ರಘಿ. ಅವನ ಒಡ್ಡೋಲಗದಲ್ಲಿ ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆಯರಂಥ ಚಿಯರ್ಲೀಡರ್ಗಳಿದ್ದರು.ದರೂ, ಚಿಯರ್ಲೀಡರ್ಗಳೆಂಬ ವೃತ್ತಿಪರ ಪರಿಕಲ್ಪನೆ ಆರಂಭವಾಗಿದ್ದು ಸುಮಾರು ನೂರಿಪ್ಪತ್ತು ವರ್ಷಗಳ ಹಿಂದೆ. ಅಮೆರಿಕದಲ್ಲಿ ಚಿಯರ್ಲೀಡಿಂಗ್ ಎನ್ನುವುದು ಆಸಕ್ತಿ ಅಥವಾ ವೃತ್ತಿಯ ಹಂತವನ್ನು ದಾಟಿ ಸಂಸ್ಕೃತಿಯೇ ಆಗಿಹೋಗಿದೆ. ಒಂದು ಅಂದಾಜಿನ ಪ್ರಕಾರ ಕೇವಲ ಅಮೆರಿಕದಲ್ಲೇ 15 ಲಕ್ಷಕ್ಕೂ ಹೆಚ್ಚು ಚಿಯರ್ಲೀಡರ್ಗಳಿದ್ದಾರೆ. ಅಮೆರಿಕ, ದಕ್ಷಿಣ ಆಫ್ರಿಕಾ ಮತ್ತು ಯುರೋಪ್ ರಾಷ್ಟ್ರಗಳ ಹುಡುಗಿಯರಿಗೆ ಬೇರೆಲ್ಲಾ ಆಯ್ಕೆಗಳಂತೆ ಚಿಯರ್ಲೀಡಿಂಗ್ ಸಹ ಒಂದು ವೃತ್ತಿ ಆಯ್ಕೆಯಾಗಿದೆ.
ಭಾರತದಲ್ಲೂ ಚಿಯರ್ಲೀಡಿಂಗ್ ಕಂಪೆನಿಗಳಿವೆ. ಆದರೆ, ಆ ತಂಡಗಳಲ್ಲೆಲ್ಲಾ ಕುಣಿಯುವವರು ವಿದೇಶಿ ಹುಡುಗಿಯರು. ನಮ್ಮ ಹುಡುಗಿಯರಿಗೆ ನೃತ್ಯ ಹೊಸದಲ್ಲವಾದರೂ ಕ್ರೀಡಾ ಮೈದಾನದಲ್ಲಿ ಕುಣಿಯುವುದು ಹೊಸ ವಿಷಯವೇ. ಅದಕ್ಕಿನ್ನೂ ಅವರು ತೆರೆದುಕೊಳ್ಳಬೇಕಿದೆ.
ಭಾರತಕ್ಕೆ ಚಿಯರ್ಲೀಡರ್ಸ್ ಬೆಡಗಿಯರು ಕಾಲಿಟ್ಟಿದ್ದು 2008ರಲ್ಲಿ ಮೊದಲ ಐಪಿಎಲ್ ಮೂಲಕ. ಆಗ ಮನರಂಜನೆಯ ಹೆಸರಿನಲ್ಲಿ ಈ ಹುಡುಗಿಯರು ಅರೆಬರೆ ಬಟ್ಟೆ ತೊಟ್ಟು ಅರೆಬೆತ್ತಲೆ ಕುಣಿಯುವುದರ ವಿರುದ್ಧ ದೊಡ್ಡ ಕೋಲಾಹಲವೇ ನಡೆದುಹೋಗಿತ್ತು. ಸಂಸತ್ತಿನಲ್ಲೂ ಚರ್ಚೆಗಳಾಗಿದ್ದವು. ಚಿಯರ್ಲೀಡರ್ಗಳಿಂದ ಕ್ರಿಕೆಟ್ಗೆ ಯಾವ ರೀತಿ ಪ್ರಯೋಜನವಾಗುತ್ತದೆ ಎಂದು ಸಂಸತ್ತಿನ ಸ್ಥಾಯಿ ಸಮಿತಿ ಕ್ರಿಕೆಟ್ ಮಂಡಳಿ ಪದಾಧಿಕಾರಿಗಳನ್ನು ಕರೆಸಿ ವಿಚಾರಣೆ ನಡೆಸಿತ್ತು. ಆದರೆ, ಕಾಲಾನಂತರದಲ್ಲಿ ಎಲ್ಲವೂ ತಣ್ಣಗಾದವು. ಚಿಯರ್ಲೀಡರ್ಗಳ ಉಡುಗೆ ಮೊದಲಿಗಿಂತ ಸ್ವಲ್ಪ ಸಭ್ಯವಾಗಿರುವುದು ನಿಜವಾದರೂ, ಸಾರ್ವಜನಿಕವಾಗಿ ಆಕ್ಷೇಪಿಸುವ ಮಂದಿಯೇ ಕ್ರಿಕೆಟ್ ಮೈದಾನಕ್ಕೆ ಬಂದು ಆಸ್ವಾದಿಸುವುದರಿಂದ ನಿಧಾನವಾಗಿ ಚಿಯರ್ಲೀಡಿಂಗ್ ಸಹ ನಮ್ಮ ಕ್ರಿಕೆಟ್ ಸಂಸ್ಕೃತಿಯ ಭಾಗವಾಗಿದೆ.ದರರ್ಥ ಜನ ಈಗ ಕ್ರಿಸ್ ಗೇಲ್ ಆಟ ನೋಡಲು ಹೋಗುವಂತೆಯೇ ಚಿಯರ್ಲೀಡರ್ಗಳನ್ನು ನೋಡಲೂ ಹೋಗುತ್ತಾರೆ. ನೃತ್ಯಕ್ಕಿಂತ ಹೆಚ್ಚಾಗಿ ನರ್ತಿಸುವವರನ್ನು ನೋಡುತ್ತಾರೆ. ಟಿವಿ ನೇರ ಪ್ರಸಾರಗಳಲ್ಲೂ ಜನ ಪ್ರತೀ ಬೌಂಡರಿ, ಸಿಕ್ಸರ್ಗಳ ಬಳಿಕ ಚಿಯರ್ಲೀಡರ್ಸ್ ನರ್ತನವನ್ನು ಅಪೇಕ್ಷಿಸುತ್ತಾರೆ. ಅವರು ನರ್ತಿಸಿದ್ದನ್ನು ಟಿವಿಯಲ್ಲಿ ತೋರಿಸದಿದ್ದಲ್ಲಿ ಸಿಟ್ಟಾಗುತ್ತಾರೆ.ಬಾರಿ ಐಪಿಎಲ್ನಲ್ಲಿ ಎಲ್ಲಾ ತಂಡಗಳೂ ಚಿಯರ್ಲೀಡರ್ಸ್ಗಳನ್ನು ಹೊಂದಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ಪರ ವೈಟ್ಮಿಶ್ಚ್ೀ ತಂಡದ ಹುಡುಗಿಯರು ನರ್ತಿಸುತ್ತಿದ್ದಾರೆ. ಕೋಲ್ಕತ್ತ ತಂಡದ ಚಿಯರ್ಲೀಡರ್ಗಳೂ ಮುದ್ದಾಗಿ ಗೊಂಬೆಯಂತಿದ್ದಾರೆ. ಕೊಚ್ಚಿ ಟಸ್ಕರ್ಸ್ ಕೇರಳ ತಂಡ ಮುಂಬೈನ ಏಜೆನ್ಸಿ ಒಂದರ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಉಕ್ರೇನ್ನ ಹುಡುಗಿಯರು ಆ ತಂಡದ ಪರ ಕುಣಿಯುತ್ತಿದ್ದಾರೆ. ಮುಂಬೈ ಇಂಡಿಯನ್ಸ್, ಡೆಕ್ಕನ್ ಚಾರ್ಜರ್ಸ್, ಡೆಲ್ಲಿ ಡೇರ್ಡೆವಿಲ್ಸ್, ರಾಜಸ್ಥಾನ ರಾಯಲ್ಸ್ ಹೀಗೆ ಎಲ್ಲಾ ತಂಡಗಳೂ ತಮ್ಮದೇ ಕುಣಿಯುವ ಬಳಗ ಹೊಂದಿವೆ. ಚೆನ್ನೈ ಸೂಪರ್ಕಿಂಗ್ಸ್ ಚಿಯರ್ಲೀಡರ್ಸ್ ತಂಡದಲ್ಲಿ ಹುಡುಗರೂ ಇರುವುದು ವಿಶೇಷ. ಪುಣೆ ವಾರಿಯರ್ಸ್ ಮಾತ್ರ ವಿದೇಶಿ ಬೆಡಗಿಗೆ ಮಾರುಹೋಗದೆ ದೇಶಿ ಸಾಂಪ್ರದಾಯಿಕ ನರ್ತಕಿಯರನ್ನು ಚಿಯರ್ಕ್ವೀನ್ಸ್ ಹೆಸರಲ್ಲಿ ಪರಿಚಯಿಸಿದೆ. ಅವರಿಂದಾಗಿ ಭರತನಾಟ್ಯ, ಕಥಕ್ಕಳಿ, ಕೂಚಿಪುಡಿ, ಬಂಗಾಳಿ, ಮರಾಠಿ, ಪಂಜಾಬಿ ಸಾಂಪ್ರದಾಯಿಕ ನೃತ್ಯಗಳೂ ಕ್ರಿಕೆಟ್ ಮೈದಾನ ಪ್ರವೇಶಿಸಿವೆ.್ರಕೆಟ್ಗೆ ಅದರಲ್ಲೂ ಟಿ20 ಮಾದರಿಗೆ ಇಂಥ ಚಿಯರ್ಲೀಡರ್ಗಳ ಅಗತ್ಯ ಇದೆಯೇ ಎನ್ನುವ ಪ್ರಶ್ನೆ ಇದ್ದರೂ, ಇದು ಆಡೆಡ್ ಅಟ್ರಾಕ್ಷನ್ ಎನ್ನುವುದು ನಿಜ. 30-40 ಸಾವಿರ ಜನ ತೆರೆದ ಕಣ್ಣು ಮುಚ್ಚದಂತೆ ನೋಡುತ್ತಿದ್ದರೆ ಆ ಹುಡುಗಿಯರಿಗಾದರೂ ಇರುಸುಮುರಿಸಾಗುವುದಿಲ್ಲವೇ? ನೃತ್ಯ ಅಥವಾ ಮುಖಕ್ಕಿಂತ ಮೈಮಾಟವನ್ನೇ ಆಸೆಕಂಗಳಿಂದ ನೋಡುವಾಗ ಮುಜುಗರವಾಗುವುದಿಲ್ಲವೇ? ಆ ಹುಡುಗಿಯರು ಆ ರೀತಿ ಯೋಚಿಸುವುದೇ ಇಲ್ಲ. ಜನ ನೋಡಲಿ ಎಂದೇ ಆ ವೃತ್ತಿ ಆಯ್ಕೆ ಮಾಡಿಕೊಂಡಿರುವಾಗ ಸಂಕೋಚಪಟ್ಟುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳುತ್ತಾರೆ.
ಹಾಗೆಂದು ಭಾರತಕ್ಕೆ ಬಂದಿರುವ ಎಲ್ಲಾ ಚಿಯರ್ಲೀಡರ್ಗಳಿಗೆ ಕ್ರಿಕೆಟ್ ಬಗ್ಗೆ ಗೊತ್ತಿದೆ ಎಂದೇನೂ ಅಲ್ಲ ಅಥವಾ ತಿಳಿದುಕೊಳ್ಳುವ ಆಸಕ್ತಿಯೂ ಇಲ್ಲ. ಅವರಿಗೆ ಇದು ಮತ್ತೊಂದು ಅಸೈನ್ಮೆಂಟ್ ಅಷ್ಟೇ. ಆದರೆ, ಯಾವ ಸಂದರ್ಭದಲ್ಲಿ ನರ್ತಿಸಬೇಕು, ಯಾವ ಸಂದರ್ಭದಲ್ಲಿ ನರ್ತಿಸಬಾರದು ಎಂದೆಲ್ಲಾ ಅವರಿಗೆ ಹೇಳಿಕೊಡಲಾಗಿರುತ್ತದೆ. ಬೌಂಡರಿ, ಸಿಕ್ಸರ್, ವಿಕೆಟ್ ಬಿದ್ದಾಗ ಇದಕ್ಕೆಲ್ಲಾ ಬೇರೆ ಬೇರೆ ಬಗೆಯ ಸ್ಟೆಪ್ಗಳನ್ನು ಅವರು ಅಭ್ಯಾಸ ಮಾಡಿರುತ್ತಾರೆ. ಕೊಚ್ಚಿ ಟಸ್ಕರ್ಸ್ ಪರ ನರ್ತಿಸುತ್ತಿರುವ ಚಿಯರ್ಲೀಡರ್ಗಳು ಉಕ್ರೇನ್ನ ಹುಡುಗಿಯರು. ಅವರಿಗೆ ಕ್ರಿಕೆಟ್ನ ತಲೆಬುಡ ಗೊತ್ತಿಲ್ಲ. ಹಾಗಾಗಿ ಪಂದ್ಯದಲ್ಲಿ ಯಾವ ಸಂದರ್ಭದಲ್ಲಿ ನರ್ತಿಸಬೇಕು ಎಂದು ಅವರಿಗೆ ಸೂಚಿಸುವುದಕ್ಕೆಂದೇ ಒಬ್ಬ ವ್ಯಕ್ತಿಯನ್ನು ನಿಯೋಜಿಸಲಾಗಿದೆ.
ಭಾರತದಲ್ಲಿ ಚಿಯರ್ಲೀಡಿಂಗ್ ಮಾಡುವುದು ಈ ಹುಡುಗಿಯರಿಗೊಂದು ವಿನೂತನ ಅನುಭವ. ದಿನಕ್ಕೊಂದು ಹೊಸ ನಗರ, ದಿನ ಬಿಟ್ಟುದಿನ ಪ್ರಯಾಣ, ಹೊಸ ಜಾಗ, ಹೊಸ ಕ್ರೀಡಾಂಗಣ, ಹೊಸ ಪ್ರೇಕ್ಷಕರು.... ಈ ನಡುವೆ ಊರು ಸುತ್ತುವ, ಶಾಪಿಂಗ್ ಮಾಡುವ, ಪಂದ್ಯ ಮುಗಿದ ಮೇಲೆ ತಡರಾತ್ರಿಯವರೆಗೆ ಕ್ರಿಕೆಟಿಗರೊಂದಿಗೆ ಪಾರ್ಟಿ ಮಾಡುವ ಅವಕಾಶ. ಇದೆಲ್ಲದರ ಜೊತೆಗೆ ಕೈತುಂಬಾ ದುಡ್ಡು...ನಲ್ಲಿ ಚಿಯರ್ಲೀಡರ್ಗಳೆಂಬ ಮಾಯಾಂಗನೆಯರು ಕ್ರಿಕೆಟ್ ವೀಕ್ಷಣೆಗೆ ಹೊಸ ಆಯಾಮ ತಂದುಕೊಟ್ಟಿದ್ದಾರೆ.




ಎಲ್ಲಿಂದಲೋ ಬಂದವರು...ಚಿಯರ್ಲೀಡಿಂಗ್ ಪರಿಕಲ್ಪನೆ ಜಗತ್ತಿಗೆ ಅಮೆರಿಕದ ಕೊಡುಗೆ. ಮಿನ್ನೆಸೊಟ ವಿಶ್ವವಿದ್ಯಾಲಯದಲ್ಲಿ ುಟ್ಬಾಲ್ ಪಂದ್ಯಗಳ ಸಂದರ್ಭದಲ್ಲಿ ಪ್ರೇಕ್ಷಕರು ಸಂಘಟಿತವಾಗಿ ಉತ್ತೇಜಿಸುವ ಹೊಸ ಬಗೆಯನ್ನು ಥಾಮಸ್ ಪೀಬಲ್ಸ್ ಎಂಬಾತ ಪರಿಚಯಿಸಿದರು. ಆದರೆ, ಜಗತ್ತಿನ ಮೊಟ್ಟಮೊದಲ ಚಿಯರ್ಲೀಡರ್ ಮಿನ್ನೆಸೊಟ ವಿಶ್ವವಿದ್ಯಾಲಯದ ವಿದ್ಯಾರ್ಥಿ ಜಾನ್ನಿ ಕ್ಯಾಂಪ್ಬೆಲ್. ರಾಹ್ ರಾಹ್ ರಾಹ್, ಸ್ಕೈ-ಉ-ಮಾಹ್-ಹೂ-ರಾಹ್! ಹೂ-ರಾಹ್! ವಾರ್ಸಿಟಿ! ವಾರ್ಸಿಟಿ! ವಾರ್ಸಿಟಿ! ಮಿನ್-ಎ-ಸೋ-ಟಾಹ್ ಎಂದು ಅವರು ಮೊದಲ ಬಾರಿ ಉತ್ತೇಜಿಸಿ ಕುಣಿದರು. ನವೆಂಬರ್ 2, 1898ರ ಆ ದಿನವೇ ಚಿಯರ್ಲೀಡಿಂಗ್ ಹುಟ್ಟಿದ ದಿನ. ಅದಾದ ಮೇಲೆ ಮಿನ್ನೆಸೊಟ ವಿವಿ ಯೆಲ್ ಲೀಡರ್ಗಳೆಂಬ 6 ಹುಡುಗರ ತಂಡವನ್ನು ಕಟ್ಟಿತು. 1903ರಲ್ಲಿ ಗಾಮಾ ಸಿಗ್ಮಾ ಎಂಬ ಮೊದಲ ಚಿಯರ್ಲೀಡಿಂಗ್ ಕಂಪೆನಿ ಉಗಮಗೊಂಡಿತು. ಆಗೆಲ್ಲಾ ಚಿಯರ್ಲೀಡಿಂಗ್ ಎನ್ನುವುದು ಗಂಡಸರ ಚಟುವಟಿಕೆಯಾಗಿತ್ತು. ಹುಡುಗಿಯರು ಈ ರಂಗ ಪ್ರವೇಶಿಸಿದ್ದು 1923ರಲ್ಲಿ. ಇದಕ್ಕೆ ಕಾರಣ ಆಗ ಕಾಲೇಜು ಮಟ್ಟದಲ್ಲಿ ಹುಡುಗಿಯರಿಗೆ ಹೆಚ್ಚು ಕ್ರೀಡೆಗಳಿರಲಿಲ್ಲ. ಹಾಗಾಗಿ ಅವರೆಲ್ಲಾ ಖಾಲಿ ಇದ್ದರು. ಜೊತೆಗೆ ಹುಡುಗರನ್ನೆಲ್ಲಾ ಮಹಾಯುದ್ಧಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಹಾಗಾಗಿ ಚಿಯರ್ಲೀಡಿಂಗ್ ತಂಡಗಳಿಗೆ ಹುಡುಗಿಯರನ್ನು ಬಳಸಿಕೊಳ್ಳಲಾಯಿತು. ಈಗ ಜಗತ್ತಿನಾದ್ಯಂತ ಶೇ. 97ರಷ್ಟು ಚಿಯರ್ಲೀಡರ್ಗಳು ಹುಡುಗಿಯರು. ಆದರೆ, ಅಮೆರಿಕದ ಕಾಲೇಜು ಮಟ್ಟದ ಚಿಯರ್ಲೀಡಿಂಗ್ ತಂಡಗಳಲ್ಲಿ ಅರ್ಧದಷ್ಟು ಹುಡುಗರೂ ಇರುತ್ತಾರೆ.ಂದು ಸಮೀಕ್ಷೆಯ ಪ್ರಕಾರ ಅಮೆರಿಕದಲ್ಲಿಂದು ಸುಮಾರು 15 ಲಕ್ಷ ಚಿಯರ್ಲೀಡರ್ಗಳಿದ್ದಾರೆ. ವಿಶ್ವದ ಇತರೆಡೆ ಸುಮಾರು 1 ಲಕ್ಷ ಚಿಯರ್ಲೀಡಿಂಗ್ ಬೆಡಗಿಯರಿದ್ದಾರೆ. ಅಮೆರಿಕದಲ್ಲಿ ಚಿಯರ್ಲೀಡರ್ಗಳಿಲ್ಲದ ಎನ್ಬಿಎ (ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಸಂಸ್ಥೆ) ಲೀಗ್ ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಅಲ್ಲಿ ಮಾಧ್ಯಮಿಕ ಶಾಲಾ ಮಟ್ಟದಿಂದಲೇ ಚಿಯರ್ಲೀಡಿಂಗ್ ಪೋಷಿಸಲಾಗುತ್ತದೆ. ವಿದ್ಯಾರ್ಥಿವೇತನ ನೀಡಲಾಗುತ್ತದೆ. ಅಮೆರಿಕದಲ್ಲಿ ಶಾಲೆ, ಕಾಲೇಜು ಮಟ್ಟದಲ್ಲಿ ಚಿಯರ್ಲೀಡಿಂಗ್ ಸ್ಪರ್ಧೆಗಳೇ ನಡೆಯುತ್ತವೆ. ಈ ವೃತ್ತಿಯ ಬಗ್ಗೆ ಹಾಲಿವುಡ್ನಲ್ಲಿ ಬ್ರಿಂಗ್ ಇಟ್ ಆನ್ನಂಥ (2000) ಯಶಸ್ವಿ ಹಾಲಿವುಡ್ ಚಿತ್ರಗಳೂ ಬಂದಿವೆ. ಇಂದು ಆಸ್ಟ್ರೇಲಿಯಾ, ಕೆನಡಾ, ಚೀನಾ, ಕೊಲಂಬಿಯಾ, ಫಿನ್ಲೆಂಡ್, ್ರಾನ್ಸ್ಘಿ, ಜರ್ಮನಿ, ಜಪಾನ್, ಹಾಲೆಂಡ್, ನ್ಯೂಜಿಲೆಂಡ್, ಯುನೈಟೆಡ್ಕಿಂಗ್ಡಂ, ದಕ್ಷಿಣ ಆಫ್ರಿಕಾಗಳಲ್ಲಿ ಚಿಯರ್ಲೀಡಿಂಗ್ ಲಾಭದಾಯಕ ವೃತ್ತಿ ಆಯ್ಕೆ ಎನಿಸಿದೆ.್ರಕೆಟ್ನಲ್ಲಿ 2007ರ ಟಿ20 ವಿಶ್ವಕಪ್ನಲ್ಲಿ ಮೊದಲ ಬಾರಿ ಚಿಯರ್ಲೀಡರ್ಗಳು ನರ್ತಿಸಿದರು. ಈಗ ಇವರಿಲ್ಲದೆ ಐಪಿಎಲ್ ಇಲ್ಲ ಎನ್ನುವಂತಾಗಿದೆ.

ಮರಳಿದ ಮಹಾರಾಜ


ಸಾಕು ಮನೆಯಲ್ಲಿರಬಾರದೇ?
ಇಂಥ ಅವಮಾನ ಬೇಕಿತ್ತೇ. ಅತ್ತು ಕರೆದು ಆಡಬೇಕೇ, ಗೌರವದಿಂದ ನಿರ್ಗಮಿಸಬಾರದೇ...?ಂಥ ಕುಹಕ, ಸಲಹೆ, ಟೀಕೆ, ಲೇವಡಿ, ಅನುಕಂಪದ ಮಾತುಗಳು ಒಂದೇ ಎರಡೇ...ದರೆ, ಸೌರವ್ ಗಂಗೂಲಿ ರಾಜನಂತೆ ಬದುಕಿದವರು. ರಾಜನಂತೆಯೇ ನಿರ್ಗಮಿಸಲು ಬಯಸಿದವರು.
ನಿಜ. ಜೀವನದಲ್ಲಿ ಕೆಲವು ಸಂಗತಿಗಳು ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ಆದರೆ, ನಮ್ಮ ಜೀವನ ನಮ್ಮ ನಿಯಂತ್ರಣದಲ್ಲಿರಬೇಕೇ ಹೊರತು ಬೇರೆಯವರ ನಿಯಂತ್ರಣಕ್ಕೆ ಸಿಲುಕಬಾರದು. ಈ ಸತ್ಯವನ್ನು ಅರ್ಥ ಮಾಡಿಕೊಂಡವರು ಗಂಗೂಲಿ.
ಭಾರತೀಯ ಕ್ರಿಕೆಟ್ನಲ್ಲಿ ಗಂಗೂಲಿಗೊಂದು ವಿಶಿಷ್ಠ ಸ್ಥಾನವಿದೆ. ಹಿಂದೆ ಅವರಂಥ ಇನ್ನೊಬ್ಬರಿರಲಿಲ್ಲ. ಮುಂದೆಯೂ ಅವರ ಜಾಗದಲ್ಲಿ ಇನ್ನೊಬ್ಬರು ಬರುವುದಿಲ್ಲ. ಕ್ರಿಕೆಟ್ ಬದುಕಿನುದ್ದಕ್ಕೂ ಅವರು ತಾವು ತೆಗೆದುಕೊಳ್ಳುವ ನಿರ್ಧಾರಗಳಿಗೆ ಬದ್ಧರಾಗಿದ್ದವರು. ತಮ್ಮ ಇಷ್ಟದಂತೆ ಬದುಕಿದವರು. ಅಂಥ ವ್ಯಕ್ತಿ ತಾವು ನಿರ್ಧರಿಸಿದಂತೆಯೇ ಕ್ರಿಕೆಟ್ನಿಂದ ನಿರ್ಗಮಿಸುವುದು ಸರಿಯಾದ ರೀತಿ. ಕೋಲ್ಕತ್ತ ನೈಟ್ರೈಡರ್ಸ್ ತಂಡದವರು ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ಗಂಗೂಲಿ ಮನೆಯಲ್ಲೇ ಕುಳಿತರೆ ಅದು ಅವರ ಗೌರವಾರ್ಹ ವೃತ್ತಿಜೀವನಕ್ಕೆ ಮಾಡಿಕೊಳ್ಳುವ ಅವಮಾನ. ಅದೇ ಕಾರಣಕ್ಕೆ ಅವರು ಕೊಚ್ಚಿ ಟಸ್ಕರ್ಸ್ ಕೇರಳ ತಂಡ ಸೇರಿಕೊಳ್ಳಲು ಯತ್ನಿಸಿದರು. ಪುಣೆ ವಾರಿಯರ್ಸ್ ಪರ ಅವಕಾಶ ಬಂದಾಗ ಎರಡೂ ಕೈಗಳಿಂದ ಬಾಚಿಕೊಂಡರು. ಈ ಮನುಷ್ಯನಿಗೆ ಇನ್ನೂ ಎಂಥಾ ಆಸೆ ಎನ್ನಬಹುದು. ಆದರೆ, ಟೀಕಿಸುವ ಮುನ್ನ ಗಂಗೂಲಿ ಮನೋಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು.ಷ್ಟಕ್ಕೂ ಗಂಗೂಲಿ ಏಕೆ ಐಪಿಎಲ್ ಆಡಬಾರದು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಗಂಗೂಲಿಗಿನ್ನೂ 38 ವರ್ಷ. ಸಚಿನ್ಗಿಂತ ಅವರು ಆರು ತಿಂಗಳು ದೊಡ್ಡವರಷ್ಟೇ. ಸಚಿನ್ರಷ್ಟು ಅಮೋಘ ಾರ್ಮ್ನಲ್ಲಿ ಅವರು ಇಲ್ಲದಿರಬಹುದು. ಒಂದು ವೇಳೆ ಇದ್ದರೂ, ಅದನ್ನು ಪ್ರದರ್ಶಿಸಲು ಅವರಿಗೆ ವೇದಿಕೆ ಇರಲಿಲ್ಲ. ಐಪಿಎಲ್ನಲ್ಲಿ 40 ವರ್ಷ ದಾಟಿದ ಶೇನ್ ವಾರ್ನ್, ಆಡಂ ಗಿಲ್ಕ್ರಿಸ್ಟ್ರಂಥವರೇ ಆಡುತ್ತಿರುವಾಗ ಗಂಗೂಲಿಯೂ ಆಡುವುದರಲ್ಲಿ ಯಾವ ತಪ್ಪೂ ಇಲ್ಲ. ಅನಿಲ್ ಕುಂಬ್ಳೆ ಸ್ವ-ಇಚ್ಛೆಯಿಂದ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮೆಂಟರ್ ಆದರು. ಆದರೆ, ಗಂಗೂಲಿಗೂ ನೀವು ಆಡಬೇಡಿ, ಕೇವಲ ಮೆಂಟರ್ ಆಗಿರಿ ಎಂದು ಹೇಳಲು ಇವರ್ಯಾರು? ಯಾವ ಕಾಲದಲ್ಲಿ ಏನಾಗಬೇಕೆಂದು ನಿರ್ಧರಿಸಬೇಕಾದವರು ಸ್ವತಃ ಗಂಗೂಲಿಯೇ ಹೊರತು ಶಾರುಖ್ ಖಾನ್ ಆಗಲೀ ಕೋಲ್ಕತ್ತ ನೈಟ್ರೈಡರ್ಸ್ ಆಗಲೀ ಅಲ್ಲ.ದು ಗಂಗೂಲಿ ಪಾಲಿಗೆ ಮತ್ತೊಂದು ಪುನರಾಗಮನ. ಮಂಗಳವಾರ ಅವರು ಡೆಕ್ಕನ್ ಚಾರ್ಜರ್ಸ್ ವಿರುದ್ಧ ಅಜೇಯ 32 ರನ್ ಬಾರಿಸುವ ಮೂಲಕ ಐಪಿಎಲ್ಗೆ ಯಶಸ್ವಿಯಾಗಿ ಮರಳಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಅವರು 75 ರನ್ ಹೊಡೆಯಬಹುದು ಅಥವಾ 5 ರನ್ಗೂ ಔಟಾಗಬಹುದು. ಆದರೆ, ಅವರು ಗಳಿಸುವ ರನ್ಗಿಂತ ಆಡುವುದು ಮುಖ್ಯ. ಭಾರತೀಯ ಕ್ರಿಕೆಟ್ನಲ್ಲಿ ಮೊಹಿಂದರ್ ಅಮರನಾಥ್ ಬಳಿಕ ಅತೀ ಹೆಚ್ಚು ಪುನರಾಗಮನಗೈದಿರುವ ಆಟಗಾರ ಗಂಗೂಲಿ. ಕ್ರಿಕೆಟ್ ವ್ಯವಸ್ಥೆ, ಆಡಳಿತಗಾರರು, ಕೋಚ್ಗಳು ಹಾಗೂ ತಂಡ ಎಷ್ಟು ಬಾರಿ ಕೈಬಿಟ್ಟರೂ ಮತ್ತೆ ಮತ್ತೆ ಮರಳಿ ತಾವು ಛಲ ಬಿಡದ ತ್ರಿವಿಕ್ರಮ ಎಂದು ನಿರೂಪಿಸಿದವರು ಗಂಗೂಲಿ.ಂಗೂಲಿ ಭಾರತ ಕಂಡ ಅತ್ಯುತ್ತಮ ನಾಯಕ. ಆದರೂ, ಕ್ರಿಕೆಟ್ ನಾಯಕತ್ವದ ವಿಚಾರ ಬಂದಾಗ ಅವರನ್ನು ಮೈಕ್ ಬ್ರೇರ್ಲಿ ಅಥವಾ ಮಾರ್ಕ್ ಟೇಲರ್ ಸ್ಥರದಲ್ಲಿ ಹೋಲಿಸಿ ಮಾತನಾಡುವುದಿಲ್ಲ. ಬ್ಯಾಟ್ಸ್ಮನ್ ಆಗಿ ಸಾಕಷ್ಟು ಉನ್ನತ ಸಾಧನೆ ಮಾಡಿದ್ದರೂ, ಅವರು ಸಚಿನ್ ತೆಂಡುಲ್ಕರ್ ಅಥವಾ ಬ್ರಿಯಾನ್ ಲಾರಾ ಲೀಗ್ಗೂ ಸೇರುವವರಲ್ಲ. ಹಿಂದೊಮ್ಮೆ ಗಂಗೂಲಿಯೇ ಹೇಳಿದಂತೆ ತೆಂಡುಲ್ಕರ್, ಲಾರಾ ಮಟ್ಟದ ಪ್ರತಿಭೆಯನ್ನು ದೈವದತ್ತವಾಗಿ ಪಡೆದು ಬಂದಾಗ ಸಾಧನೆಯಲ್ಲಿ ಎತ್ತರಕ್ಕೇರುವುದು ಸುಲಭ. ಆದರೆ, ನನ್ನಂಥ ಒಬ್ಬ ಸಾಮಾನ್ಯ ಆಟಗಾರ ಎತ್ತರಕ್ಕೇರುವುದು ಬಹಳ ಕಷ್ಟ.ಂಗೂಲಿ 1992ರಲ್ಲೇ ಏಕದಿನ ಪದಾರ್ಪಣೆ ಮಾಡಿದವರು. ನಿರಾಶಾದಾಯಕ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಅವರು ದೀರ್ಘಕಾಲ ಮೂಲೆಗುಂಪಾಗಿದ್ದರು. ಆದರೆ, 1996ರಲ್ಲಿ ಅವರು ಮರಳಿದರು. ಚೊಚ್ಚಲ ಟೆಸ್ಟ್ನಲ್ಲೇ ಶತಕ ಬಾರಿಸಿದರು. ಕ್ರಿಕೆಟ್ ಜೀವನದಲ್ಲಿ ಮುಂದಿನ 10 ವರ್ಷ ಕಾಲ ಅವರು ಹೊಸ ಹೊಸ ಶೃಂಗಗಳನ್ನು ಏರಿದರು. ಏಕದಿನ ಕ್ರಿಕೆಟ್ನಲ್ಲಿ ಸಚಿನ್ಗಿಂತ ವೇಗವಾಗಿ 10,000 ರನ್ ಗಳಿಸಿದರು. ಸಚಿನ್ ಜೊತೆ ವಿಶ್ವದಾಖಲೆ ಜೊತೆಯಾಟಗಳನ್ನು ಆಡುವ ಮೂಲಕ ಅತ್ಯಂತ ಯಶಸ್ವಿ ಆರಂಭಿಕ ಜೋಡಿ ಎನಿಸಿಕೊಂಡರು. ಆ್ಸೈಡ್ನಲ್ಲಿ ದೇವರು ಎಂಬ ಬಣ್ಣನೆಗೊಳಗಾದರು. ಸಚಿನ್ ನಾಯಕತ್ವ ನನಗಲ್ಲ ಎಂದಾಗ ಭಾರತ ತಂಡದ ನಾಯಕರೂ ಆದರು. ಮ್ಯಾಚ್ಫಿಕ್ಸಿಂಗ್ ಕರಾಳ ದಿನಗಳ ಬಳಿಕ ಕುಗ್ಗಿದ್ದ ಭಾರತ ತಂಡಕ್ಕೆ ಹೊಸ ಚೈತನ್ಯ ತುಂಬಿದರು. ಭಾರತ 2011ರಲ್ಲಿ ವಿಶ್ವಚಾಂಪಿಯನ್ ಪಟ್ಟಕ್ಕೇರಿದರೆ ಆ ಯಶಸ್ಸಿನ ಪ್ರಕ್ರಿಯೆಯ ಬೀಜ ಬಿತ್ತಿದವರು ಗಂಗೂಲಿ. ಅವರು ತಂಡದ ಆಟಗಾರರಿಗೆ ಯಾವುದೇ ತಂಡದ ವಿರುದ್ಧ, ಯಾವುದೇ ದೇಶದಲ್ಲಿ ಗೆಲ್ಲುವ ಛಲ, ಮನೋಬಲ ತುಂಬಿದರು. ಅವರ ನಾಯಕತ್ವದಲ್ಲಿ ಭಾರತ ತಂಡ ವಿದೇಶಗಳಲ್ಲೂ ಪ್ರಬಲ ಶಕ್ತಿಯಾಗಿ ಗುರುತಿಸಿಕೊಂಡಿತು. ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಐತಿಹಾಸಿಕ ಜಯ, ಆಸೀಸ್ ಪ್ರವಾಸದಲ್ಲೇ ಡ್ರಾ ಮಾಡಿಕೊಂಡಿದ್ದು ಅವರ ವೃತ್ತಿಜೀವನ ಹೈಲೈಟ್. ಭಾರತದ ಯಶಸ್ವಿ ವಿಶ್ವಕಪ್ ಅಭಿಯಾನದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಇವರೆಲ್ಲಾ ಗಂಗೂಲಿ ಬೆಂಬಲ ಕೊಟ್ಟು ಬೆಳೆಸಿದ ಆಟಗಾರರು. ಗಂಗೂಲಿಗಾಗಿ ನಾನು ಪ್ರಾಣ ಕೊಡಲೂ ರೆಡಿ ಎಂದು ಯುವರಾಜ್ ಒಮ್ಮೆಹೇಳಿದ್ದರು. ಈಗ ಪುಣೆ ವಾರಿಯರ್ಸ್ ಐಪಿಎಲ್ ತಂಡದಲ್ಲಿ ಯುವರಾಜ್ ನಾಯಕತ್ವದಡಿ ಗಂಗೂಲಿ ಆಡುತ್ತಿರುವುದು ವಿಶೇಷವೋ, ವಿಪರ್ಯಾಸವೋ ಕಾಲವೇ ಹೇಳಬೇಕು.ಂಗೂಲಿ ಯಾರಿಗೂ ಏನನ್ನೂ ನಿರೂಪಿಸಿ ತೋರಿಸಬೇಕಾದ ಅಗತ್ಯವಿಲ್ಲ. ಬದಲಿಗೆ ಅವರು ಕ್ರಿಕೆಟ್ ಆಡುತ್ತಿರುವುದು ತಮ್ಮ ಸಂತೋಷಕ್ಕೆ, ಆತ್ಮತೃಪ್ತಿಗೆ. ಅವರ ಜೀವನ ನಿರ್ವಹಣೆಗೆ ಕ್ರಿಕೆಟ್ ಅಗತ್ಯವಿಲ್ಲ. ಪುಣೆ ಪರ ಆಡುವುದರಿಂದ ಸಿಗುವ 80 ಲಕ್ಷ ಅವರು ತಲೆತಲಾಂತರದಿಂದ ಹೊಂದಿರುವ ಕುಟುಂಬ ಆಸ್ತಿಯ ಎದುರು ಸಣ್ಣ ಮೊತ್ತ. ಆದರೆ, ಅವರು ಇಷ್ಟು ಹಟ ತೊಟ್ಟು ಕ್ರಿಕೆಟ್ ಆಡುವುದು ಆಟದ ಮೇಲಿನ ತುಡಿತಕ್ಕಾಗಿ, ವ್ಯಾಮೋಹಕ್ಕಾಗಿ. ಅಷ್ಟಕ್ಕೂ ಐಪಿಎಲ್ನಲ್ಲಿ ಅವರು ಯಾರ ಅವಕಾಶ ಕಿತ್ತುಕೊಳ್ಳುವ ಪ್ರಶ್ನೆಯೂ ಇಲ್ಲ. ಕ್ರಿಕೆಟ್ನಲ್ಲಿ ತಾವು ಔಟ್ಡೇಟೆಡ್ ಅಲ್ಲ, ಇಂದಿಗೂ ಸಲ್ಲುವವರು ಎಂದು ತಮಗೆ ತಾವು ಸಾಬೀತು ಪಡಿಸಿಕೊಳ್ಳುವ ಹಟವಷ್ಟೇ ಅವರಿಗಿರುವುದು.ಂಗೂಲಿಯನ್ನು ಮೂಲೆಗುಂಪು ಮಾಡಲು ಯತ್ನಿಸಿದ ಗ್ರೆಗ್ ಚಾಪೆಲ್, ಜಾನ್ ಬುಕನನ್ ಸ್ವತಃ ಮೂಲೆಗುಂಪಾದರು. ಅವರಿಂದು ಯಾರಿಗೂ ನೆನಪಿಲ್ಲ. ಆದರೆ, ಭಾರತೀಯ ಕ್ರಿಕೆಟ್ನಲ್ಲಿ ಸೌರವ್ ಗಂಗೂಲಿ ಹಿಂದೆಯೂ ಇದ್ದರು, ಇಂದು ಇದ್ದಾರೆ, ಮುಂದೂ ಇರುತ್ತಾರೆ.
ನಾನಾ ರೀತಿ, ನಾನಾ ಪಾತ್ರಗಳಲ್ಲಿ ಅವರು ಭಾರತೀಯ ಕ್ರಿಕೆಟ್ಗೆ ಸೇವೆ ಸಲ್ಲಿಸುವುದು ಸಾಕಷ್ಟಿದೆ.