Wednesday, April 4, 2012

ಭಾರತದ ಫೇಸ್ ನಮ್ಮ ಲಿಯಾಂಡರ್ ಪೇಸ್



ಬಹುಶಃ ಅವರು ಹಿಂದಿನ ಜನ್ಮದಲ್ಲಿ ಸ್ವಾತಂತ್ರೃ ಹೋರಾಟಗಾರ ಆಗಿದ್ದಿರಬಹುದು.....
ಒಬ್ಬ ಕ್ರೀಡಾಪಟುವಿನ ಬಗ್ಗೆ ಇಂಥ ಭಾವನೆ ಮೂಡಿದಲ್ಲಿ ಆ ಆಟಗಾರ ನಿಶ್ಚಿತವಾಗಿಯೂ ಲಿಯಾಂಡರ್ ಪೇಸ್ ಆಗಿರುತ್ತಾರೆ.
ಕೆಲವೊಮ್ಮೆ ಪ್ರಕೃತಿಯ ನ್ಯಾಯ ಸರಿಯಿಲ್ಲ ಎಂಬ ನಮ್ಮ ಅಸಹನೆ ಸಕಾರಣವಾಗಿರುತ್ತದೆ. ಏಕೆಂದರೆ, ಇಂದಿನ ಹೈಟೆಕ್ ಯುಗದಲ್ಲಂತೂ ಅತಿಯಾಗಿ ವೈಭವೀಕರಣಗೊಳ್ಳುವುದಷ್ಟೇ ಸಾಧನೆ ಎಂಬ ನಂಬಿಕೆ ಅಥವಾ ಭ್ರಮೆಯಲ್ಲಿ ನಾವಿರುತ್ತೇವೆ. ಹೀಗಾಗಿ ಅದೆಷ್ಟೋ ಮಹತ್ವದ ಸಂಗತಿಗಳ ಮಹತ್ವ ಅರ್ಥವಾಗಿರುವುದಿಲ್ಲ ಮತ್ತು ಅದಕ್ಕೆ ಸಿಗಬೇಕಾದ ನ್ಯಾಯಸಮ್ಮತ ಮೌಲ್ಯ ಸಿಕ್ಕಿರುವುದಿಲ್ಲ.
ಜಾಗತಿಕ ಟೆನಿಸ್ ಭೂಪಟದಲ್ಲಿ ಭಾರತದ ‘ಫೇಸ್’ ಆಗಿರುವ ಲಿಯಾಂಡರ್ ಪೇಸ್‌ರ ವೃತ್ತಿಜೀವನ-ಸಾಧನೆಗೆ ತಕ್ಕ ಗೌರವ ಯಾವತ್ತೂ ಲಭಿಸಿಲ್ಲ. ಆದರೆ, ಅವರು ಪ್ರಚಾರಕ್ಕಾಗಿ ಆಡುವವರಲ್ಲ. ಹಾಗಾಗಿ ಅವರಿಗೆ ಬೇಸರವಾಗುವುದೂ ಇಲ್ಲ.
ಸಚಿನ್ ತೆಂಡುಲ್ಕರ್ ಅವರ ಮಹಾನ್ ಶತ-ಶತಕದ ಸಾಧನೆಯ ಗುಂಗು ಎಲ್ಲೆಡೆ ಆವರಿಸಿದ್ದಾಗ ಲಿಯಾಂಡರ್ ಪೇಸ್ ಟೆನಿಸ್‌ನಲ್ಲಿ 50 ಎಟಿಪಿ ಡಬಲ್ಸ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಆದರೆ, ನೂರನೇ ಶತಕಕ್ಕೆ ಸಿಕ್ಕ ಪ್ರಚಾರದ ಅರ್ಧಭಾಗ ಸಹ ಇವರ 50 ಪ್ರಶಸ್ತಿಗಳಿಗೆ ಸಿಗಲಿಲ್ಲ. ಬೇರೆ ಬೇರೆ ಕ್ರೀಡೆಯ ಇಬ್ಬರು ಆಟಗಾರರನ್ನು, ಅವರ ಸಾಧನೆಗಳನ್ನು ಹೋಲಿಸುವುದು ಸಮಂಜಸವಲ್ಲವಾದರೂ, ಅದಕ್ಕೆ ಸಲ್ಲಿಸಬೇಕಾದ ಗೌರವದಲ್ಲಿ ಪಕ್ಷಪಾತ ಆಗಬಾರದು.
‘ಟೆನಿಸ್‌ನಲ್ಲಿ 50 ಡಬಲ್ಸ್ ಪ್ರಶಸ್ತಿ ಮಹಾನ್ ಸಾಧನೆ ಏನಲ್ಲ. ಮಾರ್ಟಿನಾ ನವ್ರಾಟಿಲೋವಾ ಅದಕ್ಕಿಂತ ಮೂರು ಪಟ್ಟು ಹೆಚ್ಚಿನ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದಾರೆ’ ಎನ್ನಬಹುದು. ಆದರೆ, ಲಿಯಾಂಡರ್ ಟೆನಿಸ್‌ಗೆ ಅದರಲ್ಲೂ ಭಾರತೀಯ ಕ್ರೀಡೆಗಳಿಗೆ ತಂದುಕೊಟ್ಟಿರುವ ಮೌಲ್ಯ 50 ಪ್ರಶಸ್ತಿಗಳ ತೂಕಕ್ಕಿಂತ ಸಾವಿರ ಪಟ್ಟು ಹೆಚ್ಚಿನದು.
ಕ್ರಿಕೆಟ್‌ನಲ್ಲಿ ಯಾವ ರೀತಿ ಇನ್ನೊಬ್ಬ ಸಚಿನ್ ತೆಂಡುಲ್ಕರ್ ಹುಟ್ಟಿಬರುವುದು ಸಾಧ್ಯವಿಲ್ಲವೋ ಅದೇ ರೀತಿ ಟೆನಿಸ್‌ನಲ್ಲೂ ಇನ್ನೊಬ್ಬ ಲಿಯಾಂಡರ್ ಪೇಸ್ ಭವಿಷ್ಯದಲ್ಲಿ ಹೊರಹೊಮ್ಮುವುದು ಅಸಾಧ್ಯ. ನಮಗೆ ತೆಂಡುಲ್ಕರ್ ಎಂದೊಡನೆ ಅವರ ಮಹಾಮಹಾ ಸಾಧನೆಗಳು, ದಾಖಲೆಗಳು, ಶತಕ ಬಾರಿಸಿದೊಡನೆ ಅವರು ವಿನೀತರಾಗಿ ಆಗಸದತ್ತ ಮುಖ ಮಾಡುವ ರೀತಿ ನೆನಪಾಗುತ್ತದೆ. ಆದರೆ, ಲಿಯಾಂಡರ್ ಪೇಸ್ ವಿಷಯ ಬಂದಾಗ ಭಾರತದ ತ್ರಿವರ್ಣ ಧ್ವಜವೇ ಕಣ್ಮುಂದೆ ಸುಳಿಯುತ್ತದೆ. ಭಾರತದ ಕ್ರೀಡಾ ಪಟುಗಳಲ್ಲೇ ತಮ್ಮ ಆಟದಲ್ಲಿ, ಆವೇಶದಲ್ಲಿ, ಅಭಿವ್ಯಕ್ತಿಯಲ್ಲಿ ದೇಶಪ್ರೇಮವನ್ನು ಅತ್ಯಂತ ಪರಿಪೂರ್ಣವಾಗಿ ಬಿಂಬಿಸುವ ಕ್ರೀಡಾಪಟುವೆಂದರೆ ಲಿಯಾಂಡರ್ ಪೇಸ್.
ಟೆನಿಸ್ ಒಂದು ವೈಯಕ್ತಿಕ ಕ್ರೀಡೆ. ಟೆನಿಸ್‌ನ ಪ್ರಮುಖ ಟೂರ್ನಿಗಳಾದ ಗ್ರಾಂಡ್‌ಸ್ಲಾಂಗಳಿಗೂ ದೇಶಕ್ಕೂ ಏನಕೇನ ಸಂಬಂಧವೂ ಇಲ್ಲ. ಅವೆಲ್ಲಾ ವೃತ್ತಿಪರ ಟೂರ್ನಿಗಳಾಗಿರುವ ಕಾರಣ ಆಟಗಾರರು ಅಲ್ಲಿ ವ್ಯಕ್ತಿಗತ ನೆಲೆಯಲ್ಲಿ ಪಾಲ್ಗೊಳ್ಳುತ್ತಾರೆ. ಅವರ ಸಾಧನೆಗಳೂ ವೈಯಕ್ತಿಕವೇ ಆಗಿರುತ್ತದೆ. ಗ್ರಾಂಡ್‌ಸ್ಲಾಂಗಳಲ್ಲಿ ಲಿಯಾಂಡರ್ ಆಗಲೀ, ಮಹೇಶ್ ಭೂಪತಿ, ಸಾನಿಯಾ ಮಿರ್ಜಾ ಆಗಲಿ ಭಾರತದ ಆಟಗಾರರೆಂದು ಗುರುತಿಸಲ್ಪಡುವರೇ ಹೊರತು ಭಾರತದ ಪ್ರತಿನಿಧಿಗಳೆಂದಲ್ಲ.
ಇಂಥ ಟೆನಿಸ್‌ನಲ್ಲಿ ಆಟಗಾರರಿಗೆ ದೇಶ ಪ್ರತಿನಿಧಿಸುವ ಅವಕಾಶ ದೊರೆಯುವುದು ಡೇವಿಸ್ ಕಪ್, ಫೆಡರೇಷನ್ ಕಪ್‌ನಂಥ ತಂಡ ಟೂರ್ನಿಗಳಲ್ಲಿ, ಏಷ್ಯಾಡ್, ಕಾಮನ್ವೆಲ್ತ್ ಗೇಮ್ಸ್, ಒಲಿಂಪಿಕ್ಸ್‌ನಂಥ ಕ್ರೀಡಾಕೂಟಗಳಲ್ಲಿ ಮಾತ್ರ.
ಲಿಯಾಂಡರ್ ಪೇಸ್ ಒಬ್ಬ ಆಟಗಾರನ ಚೌಕಟ್ಟಿನಿಂದ ಹೊರಬಂದು ದೇಶಪ್ರೇಮಿ ಆಗುವುದು ಇಂಥ ಡೇವಿಸ್ ಕಪ್, ಏಷ್ಯಾಡ್, ಒಲಿಂಪಿಕ್ಸ್‌ಗಳಲ್ಲೇ. ಅದರಲ್ಲೂ ವಿಶೇಷವಾಗಿ ಡೇವಿಸ್ ಕಪ್ ಪಂದ್ಯಗಳಲ್ಲಿ ಲಿಯಾಂಡರ್ ಭಾರತಕ್ಕಷ್ಟೇ ಅಲ್ಲ ವಿಶ್ವದಲ್ಲೇ ಮಾದರಿ ಆಟಗಾರ. ಅವರಷ್ಟು ದೀರ್ಘ ಕಾಲ ದೇಶವನ್ನು ಪ್ರತಿನಿಧಿಸಿರುವ, ಅದಕ್ಕಿಂತ ಹೆಚ್ಚಾಗಿ ಅತೀ ಹೆಚ್ಚಿನ ಪಂದ್ಯಗಳನ್ನು (86 ಜಯ, 31 ಸೋಲು) ಗೆದ್ದುಕೊಟ್ಟಿರುವ ವಿಶ್ವದ ಮತ್ತೊಬ್ಬ ಆಟಗಾರನನ್ನು ದುರ್ಬೀನು ಹಾಕಿ ಹುಡುಕಬೇಕು.
ಲಿಯಾಂಡರ್ ಒಂದೂ ಗ್ರಾಂಡ್‌ಸ್ಲಾಂ ಸಿಂಗಲ್ಸ್ ಪ್ರಶಸ್ತಿ ಗೆಲ್ಲದೇ ಇರಬಹುದು. ಆದರೆ, ಡೇವಿಸ್ ಕಪ್‌ನಲ್ಲಿ ಅವರ ಸಾಧನೆ ಪೀಟ್ ಸಾಂಪ್ರಾಸ್, ಆಂಡ್ರೆ ಅಗಾಸ್ಸಿ, ರೋಜರ್ ಫೆಡರರ್‌ಗಿಂತ ಮಿಗಿಲು. ನಿಜ ಹೇಳಬೇಕೆಂದರೆ, ಫೆಡರರ್‌ರಂಥ ಮಹಾನ್ ಆಟಗಾರರು ತಮ್ಮ ವೃತ್ತಿಜೀವನದ ಉತ್ತುಂಗದ ದಿನಗಳಲ್ಲಿ ಡೇವಿಸ್ ಕಪ್‌ನಿಂದ ದೂರವೇ ಉಳಿದರು. ಸ್ವಿಸ್ ಮಾಸ್ಟರ್ ವಿಶ್ವ ನಂ.1 ಶ್ರೇಯಾಂಕದಿಂದ ಕೆಳಗಿಳಿದ ಮೇಲಷ್ಟೇ ಡೇವಿಸ್ ಕಪ್‌ನಲ್ಲಿ ಸ್ವಿಟ್ಜರ್ಲೆಂಡ್ ಪರ ಆಡಿದರು. ಬಹುಶಃ ಲಿಯಾಂಡರ್ ಸಹ ತಮ್ಮ ವೃತ್ತಿಜೀವನದ ಉತ್ತುಂಗದ ವರ್ಷಗಳಲ್ಲಿ ಗ್ರಾಂಡ್‌ಸ್ಲಾಂ ಸಿಂಗಲ್ಸ್ ಟೆನಿಸ್‌ಗೆ ಆದ್ಯತೆ ನೀಡಿದ್ದರೆ ಅವರಿಂದ ಅನೇಕ ‘ಗ್ಲಾೃಮರಸ್’ ಸಾಧನೆಗಳನ್ನು ನಿರೀಕ್ಷಿಸಬಹುದಿತ್ತೇನೋ. ಆದರೆ, ಅವರು ಹಾಗೆ ಮಾಡಲಿಲ್ಲ. ಅಪಾರ ಹಣ ತಂದುಕೊಡುವ ಗ್ರಾಂಡ್‌ಸ್ಲಾಂಗಳಿಗಿಂತ ಹೆಮ್ಮೆ ತರುವ ಡೇವಿಸ್ ಕಪ್ ಹೋರಾಟಗಳಿಗೇ ಅವರು ಪ್ರಾಶಸ್ತ್ಯ ನೀಡಿದರು. ಪ್ರತಿಯೊಂದು ಪಂದ್ಯವನ್ನೂ ಇದೇ ತಮ್ಮ ಜೀವನದ ಕೊಟ್ಟಕೊನೆಯ ಹೋರಾಟವೆಂಬಂತೆ ಆಡಿದರು. ಅವರ ಆಟ, ಅವರ ತನ್ಮಯತೆ, ಒಂದೊಂದು ಅಂಕ ಗಳಿಸಿದ ಸಂದರ್ಭದಲ್ಲೂ ಅವರು ಮೆರೆಯುವ ಭಾವತೀವ್ರತೆ, ಇದು ನನ್ನ ಜಯವಲ್ಲ ದೇಶದ ಜಯ ಎಂಬ ಧನ್ಯತಾಭಾವವನ್ನು ಬೇರೆಲ್ಲೂ ಕಾಣುವುದು ಸಾಧ್ಯವಿಲ್ಲ.
ದೀರ್ಘಕಾಲೀನತೆಯ ವಿಷಯದಲ್ಲೂ ಲಿಯಾಂಡರ್ ಟೆನಿಸ್‌ನ ಸಚಿನ್ ತೆಂಡುಲ್ಕರ್ ಎನ್ನಬಹುದು. ಕ್ರಿಕೆಟ್ ಸವ್ಯಸಾಚಿಯ ಪಯಣ 1989ರಲ್ಲಿ ಆರಂಭಗೊಂಡರೆ, ಲಿಯಾಂಡರ್ ಪಯಣ 1990ರಲ್ಲಿ ಶುರುವಾಯಿತು. ಮೊದಲ ಬಾರಿ ದೇಶ ಪ್ರತಿನಿಧಿಸಿ ಆಡಿದಾಗ ಇಬ್ಬರಿಗೂ 16 ವರ್ಷ. ಲಿಯಾಂಡರ್ ತಮ್ಮ ಮೊಟ್ಟ ಮೊದಲ ಡೇವಿಸ್ ಕಪ್ ಪಂದ್ಯದಲ್ಲೇ ಜೀಶನ್ ಅಲಿ ಜತೆಯಲ್ಲಿ ಜಪಾನ್ ತಂಡವನ್ನು ಸೋಲಿಸಿದ್ದರು. 1991ರಲ್ಲಿ ವೃತ್ತಿಪರ ಆಟಗಾರರಾದ ಪೇಸ್ 1996ರ ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಾಗ ಒಲಿಂಪಿಕ್ಸ್‌ನ ವೈಯಕ್ತಿಕ ಸ್ಪರ್ಧೆಗಳಲ್ಲಿ ಪದಕ ಗೆದ್ದ ಭಾರತದ ಕೇವಲ 2ನೇ ಆಟಗಾರ ಎನಿಸಿಕೊಂಡರು. ಇನ್ನು ಕ್ರೋಷಿಯಾ ವಿರುದ್ಧದ ಡೇವಿಸ್ ಕಪ್ ಪಂದ್ಯದಲ್ಲಿ ಮಾಜಿ ವಿಶ್ವ ನಂ.1 ಗೋರಾನ್ ಇವಾನಿಸೆವಿಚ್‌ರನ್ನು ಸೋಲಿಸಿದ್ದು ಅವರ ಅವಿಸ್ಮರಣೀಯ ಸಾಧನೆ.
ಡೇವಿಸ್ ಕಪ್ ಪಂದ್ಯಗಳಲ್ಲಿ ಎಟಿಪಿ ಶ್ರೇಯಾಂಕಕ್ಕೆ ಕವಡೆ ಕಿಮ್ಮತ್ತಿಲ್ಲ. ಅಲ್ಲಿ ದೇಶಕ್ಕಾಗಿ ಆಡುವ ಹೆಮ್ಮೆಯೇ ದೊಡ್ಡದೆಂದು ಹತ್ತುಹಲವು ಬಾರಿ ನಿರೂಪಿಸಿದವರು ಪೇಸ್. ಭಾರತ 1991ರಿಂದ 1998ರ ಅವಧಿಯಲ್ಲಿ ಸತತವಾಗಿ ಈ ಟೂರ್ನಿಯ ವಿಶ್ವ ಗುಂಪಿನಲ್ಲಿ ಸ್ಥಾನ ಪಡೆದಿದ್ದರೆ ಅದರಲ್ಲಿ ಅವರ ಕೊಡುಗೆ ಸಿಂಹಪಾಲು. ಭಾರತದ ಪರ ಆಡುವಾಗ ಪೀಟ್ ಸಾಂಪ್ರಾಸ್‌ರಂಥ ಆಟಗಾರರಿಗೆ ಬೆವರಿಳಿಸಿದ್ದ ಲಿಯಾಂಡರ್, ವೇಯ್ನ ಫೆರೀರಾ, ಜಾನ್ ಸಿಮರಿಂಕ್, ಜಿರಿ ನೋವಾಕ್‌ರಂಥ ಆಟಗಾರರನ್ನು ಅವರು ಉತ್ತುಂಗ ಫಾರ್ಮ್‌ನಲ್ಲಿದ್ದಾಗಲೇ ಸೋಲಿಸಿದರು. ಡಬಲ್ಸ್‌ನಲ್ಲೂ ಮಹೇಶ್ ಭೂಪತಿ ಜೊತೆ ನಂ.1 ತಂಡ ಕಟ್ಟಿದ ಪೇಸ್ ಯಾವುದೇ ರಾಷ್ಟ್ರದ ವಿರುದ್ಧ ಡೇವಿಸ್ ಕಪ್ ಹಣಾಹಣಿ ಪ್ರಾರಂಭಗೊಳ್ಳುವ ಮುನ್ನವೇ ಸಿಂಗಲ್ಸ್, ಡಬಲ್ಸ್ ಹಾಗೂ ರಿವರ್ಸ್ ಸಿಂಗಲ್ಸ್ ಹೀಗೆ ತಾವು ಆಡುವ ಮೂರು ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ಖಾತ್ರಿ ಪಡಿಸಿರುತ್ತಿದ್ದರು. ಬಹುಶಃ ಪೇಸ್ ಉತ್ತುಂಗದ ದಿನಗಳಲ್ಲಿ ಅವರಿಗೆ ಇನ್ನೊಬ್ಬ ಸಮರ್ಥ ಸಿಂಗಲ್ಸ್ ಆಟಗಾರನ ಸಾಥ್ ದೊರೆತಿದ್ದರೆ, ಭಾರತ ಡೇವಿಸ್ ಕಪ್ ಚಾಂಪಿಯನ್ ಪಟ್ಟದ ಸನಿಹ ಸಾಗುವುದು ಸಾಧ್ಯವಿತ್ತು. 1993ರಲ್ಲಿ ಸ್ವಿಟ್ಜರ್ಲೆಂಡ್, ಫ್ರಾನ್ಸ್ ವಿರುದ್ಧ ಗೆದ್ದಿದ್ದ ಭಾರತ ಸೆಮಿಫೈನಲ್ ತಲುಪಿ ಇತಿಹಾಸ ನಿರ್ಮಿಸುವಲ್ಲಿ ಲಿಯಾಂಡರ್ ಪಾತ್ರ ಅವಿಸ್ಮರಣೀಯ.
ಇಂಡಿಯನ್ ಪ್ರೀಮಿಯರ್ ಲೀಗ್ ಅದ್ಧೂರಿ ಚಾಲನೆ ಪಡೆದಿರುವಂತೆಯೇ ಕ್ರಿಕೆಟ್ ವಲಯದಲ್ಲಿ ದೇಶ / ಕ್ಲಬ್ ಅಥವಾ ದುಡ್ಡು/ ದೇಶ ಪ್ರಶ್ನೆ ತಲೆದೋರಿದೆ. ಗಾಯದ ಕಾರಣ ನೀಡಿ ದೇಶ ಆಡುವ ಪಂದ್ಯ, ಸರಣಿಗಳಿಂದ ಹಿಂದೆ ಸರಿಯುವ ಆಟಗಾರರು ಐಪಿಎಲ್‌ನಲ್ಲಿ ಆಡುವ ನಿದರ್ಶನಗಳು ಅನೇಕ ಜಿಜ್ಞಾಸೆಗಳನ್ನು ಹುಟ್ಟುಹಾಕಿದೆ. ಕೇವಲ ಐಪಿಎಲ್‌ನಲ್ಲಿ ಆಡುವ ಸಲುವಾಗಿ ಕಳೆದ ವರ್ಷ ಶ್ರೀಲಂಕಾದ ಲಸಿತ್ ಮಾಲಿಂಗ ಟೆಸ್ಟ್ ಕ್ರಿಕೆಟ್‌ನಿಂದಲೇ ಅಕಾಲ ನಿವೃತ್ತಿ ಘೋಷಿಸಿದ್ದರು. ಆಸ್ಟ್ರೇಲಿಯಾದ ಆಂಡ್ರೂೃ ಸೈಮಂಡ್ಸ್, ಆಡಂ ಗಿಲ್‌ಕ್ರಿಸ್ಟ್ ಮೊದಲಾದವರು ಇನ್ನೂ ಕೆಲವು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಬಾಕಿ ಇರುವಾಗಲೇ ಐಪಿಎಲ್ ಸಲುವಾಗಿ ನಿವೃತ್ತರಾಗಿದ್ದರು. ಕಳೆದ ಆವೃತ್ತಿಯಲ್ಲಿ ಗೌತಂ ಗಂಭೀರ್, ವೀರೇಂದ್ರ ಸೆಹ್ವಾಗ್ ಮೊದಲಾದವರು ಗಾಯ ಮುಚ್ಚಿಟ್ಟು ಐಪಿಎಲ್‌ನಲ್ಲಿ ಆಡಿದ ಆರೋಪಕ್ಕೆ ಗುರಿಯಾಗಿದ್ದರು. ಈ ಬಾರಿಯೂ ಸೆಹ್ವಾಗ್‌ರ ಫಿಟ್‌ನೆಸ್ ಬಗ್ಗೆ ಅನುಮಾನಗಳಿವೆ. ಸಚಿನ್ ತೆಂಡುಲ್ಕರ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಸಲುವಾಗಿ ಹೆಬ್ಬೆರಳಿನ ಶಸ್ತ್ರಚಿಕಿತ್ಸೆ ಮುಂದೆ ಹಾಕಿದ್ದಾರೆ. ಐಪಿಎಲ್‌ನ ವಾಣಿಜ್ಯ ಮೌಲ್ಯಕ್ಕೆ ಸಚಿನ್, ಧೋನಿ, ಸೆಹ್ವಾಗ್ ಲಭ್ಯತೆ ಅನಿವಾರ್ಯ ಆಗಿದ್ದರೂ, ಇಂಥ ಪ್ರಕರಣಗಳಿಂದ ದೇಶ / ಕ್ಲಬ್ ಪ್ರಶ್ನೆಗಳು ಹುಟ್ಟುತ್ತವೆ.
ಲಿಯಾಂಡರ್ ಪೇಸ್‌ರ ದೇಶ ಭಕ್ತಿಯ ಆಟ ಇಲ್ಲಿ ಇತರ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಮಾದರಿಯಾಗಬೇಕು. 38 ವರ್ಷದ ಈ ಹಿರಿಯ ಆಟಗಾರ ಕಳೆದ ವರ್ಷದ್ದೊಂದು ಅಪವಾದ ಬಿಟ್ಟರೆ ಗಾಯದ ಸಲುವಾಗಿ ಡೇವಿಸ್ ಕಪ್‌ನಲ್ಲಿ ದೇಶ ಪ್ರತಿನಿಧಿಸುವ ಕರ್ತವ್ಯದಿಂದ ತಪ್ಪಿಸಿಕೊಂಡವರಲ್ಲ. ಈ ಪಂದ್ಯಗಳಿಗೆ ಸಜ್ಜಾಗುವ ಸಲುವಾಗಿ ಅವರು ಲಾಭದಾಯಕ ಗ್ರಾಂಡ್‌ಸ್ಲಾಂಗಳನ್ನು ನಿರ್ಲಕ್ಷಿಸಿದ್ದೂ ಇದೆ. ಇಂಥ ಬದ್ಧತೆಯಿಂದಾಗಿಯೇ ಲಿಯಾಂಡರ್ ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರು ಡೇವಿಸ್ ಕಪ್‌ನಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸುತ್ತಲೇ ಭಾರತದ ಪರ ಅತೀ ಹೆಚ್ಚು ಗ್ರಾಂಡ್‌ಸ್ಲಾಂ ಗೆದ್ದ, ಎಲ್ಲಾ ನಾಲ್ಕು ಗ್ರಾಂಡ್‌ಸ್ಲಾಂ ಗೆದ್ದ ವಿರಳ ದಾಖಲೆಗಳಿಗೂ ಭಾಜನರಾಗಿದ್ದಾರೆ.
ಸತತ 22 ವರ್ಷಗಳಿಂದ ಟೆನಿಸ್ ಆಡುತ್ತಿದ್ದರೂ, ಇನ್ನೂ ಹದಿಹರೆಯದ ಹುಮ್ಮಸ್ಸು ಉಳಿಸಿಕೊಂಡಿರುವ ಪೇಸ್ ತಮ್ಮ 38ನೇ ವಯಸ್ಸಿನಲ್ಲೂ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕ ಭರವಸೆ. ಅವರ ಹಿರಿಮೆ ಗುರುತಿಸಲು ಇದೊಂದೇ ಅಂಶ ಸಾಕು.

Friday, September 2, 2011

ಎಲ್ಲಾ ಕಡೆಯೂ ಸಲ್ಲುವ ದ್ರಾವಿಡ್


ಶ್ರೇಷ್ಠತೆಗೆ ದೇಶ-ಕಾಲ-ಸಂದರ್ಭವೆಂಬುದಿಲ್ಲ.
ಶ್ರೇಷ್ಠರಿಗೂ ಅಷ್ಟೇ.
ಶ್ರೇಷ್ಠರು ಯಾವಾಗಲೂ ಶ್ರೇಷ್ಠರೇ.
ಇಂಗ್ಲೆಂಡ್ ವಿರುದ್ಧ ಏಕೈಕ ಟಿ20 ಪಂದ್ಯದಲ್ಲಿ ರಾಹುಲ್ ದ್ರಾವಿಡ್ ನಿರೂಪಿಸಿದ್ದೂ ಅದನ್ನೇ.
ಅದು ಅವರ ವೃತ್ತಿಜೀವನದ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.
ಅದು ಭಾರತದ ಪರ ಅವರ ಪಾಲಿಗೆ ಕೊನೆಯ ಟಿ20 ಪಂದ್ಯವೂ ಆಗಿತ್ತು.
ಭಾರತದ ಪರ 1996ರಲ್ಲಿ ಟೆಸ್ಟ್ ಪದಾರ್ಪಣೆಗೈದ 15 ವರ್ಷದ ಬಳಿಕ ದ್ರಾವಿಡ್ ಈ ವಿಶೇಷ ಪಂದ್ಯವನ್ನು ಆಡಿದ್ದರು.
ಹಾಗೆ ನೋಡಿದರೆ, ಟಿ20 ಮಾದರಿ ರಾಹುಲ್ ಗೆ ಅಪರಿಚಿತವೇನೂ ಆಗಿರಲಿಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 3 ವರ್ಷ ಹಾಗೂ ರಾಜಸ್ಥಾನ ರಾಯಲ್ಸ್ ಪರ ಒಂದು ವರ್ಷ ಐಪಿಎಲ್ ಆಡಿರುವ ದ್ರಾವಿಡ್ ಕ್ರಿಕೆಟ್ ನ ಕಿರು ಮಾದರಿಗೆ ಹೊಸಬರೇನೂ ಆಗಿರಲಿಲ್ಲ. ಅಲ್ಲದೆ ಅವರು ನಿರೂಪಿಸುವಂಥದ್ದೂ ಏನೂ ಇರಲಿಲ್ಲ.
ಬದಲಿಗೆ 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆ ಸ್ವತಃ ಭಾರತ ತಂಡದಿಂದ ಹೊರಗುಳಿದಿದ್ದ ಅವರು ಮುಂದೆ ಆಡುವಂಥ ಪ್ರಮೇಯ ಒದಗಿಬಂದಿರಲಿಲ್ಲ.
2009ರ ಚಾಂಪಿಯನ್ಸ್ ಟ್ರೋಫಿ ಬಳಿಕ ಏಕದಿನ ತಂಡದಿಂದಲೂ ಹೊರಗುಳಿಯುವುದರೊಂದಿಗೆ ದ್ರಾವಿಡ್ ಟಿ20 ಕ್ರಿಕೆಟ್ ಗೆ ಭಾರತ ತಂಡಕ್ಕೆ ಪರಿಗಣನೆಯಲ್ಲಿರಲೇ ಇಲ್ಲ.
ಆದರೆ, ಹಾಲಿ ಇಂಗ್ಲೆಂಡ್ ಪ್ರವಾಸದಲ್ಲಿ ದ್ರಾವಿಡ್ ಟಿ20 ತಂಡದಲ್ಲೂ ಆಡುವಂಥ ಪ್ರಸಂಗ ಎದುರಾಯಿತು. ಟೆಸ್ಟ್ ಸರಣಿಯಲ್ಲಾದಂತೆ ಈ ಪಂದ್ಯದಲ್ಲೂ ಭಾರತದ ಬ್ಯಾಟ್ಸ್ ಮನ್ ಗಳು ದಯನೀಯ ವೈಫಲ್ಯ ಅನುಭವಿಸಿದ್ದರಿಂದ ಭಾರತ ಈ ಪಂದ್ಯವನ್ನು ಸೋಲಬೇಕಾಯಿತು. ಆದರೆ, ದ್ರಾವಿಡ್ ತಮ್ಮ ಚಿಕ್ಕ ಚೊಕ್ಕ ಆಟದ ಮೂಲಕ ಹೃದಯವನ್ನಂತೂ ಗೆದ್ದರು.
ದ್ರಾವಿಡ್ ಆರಂಭದಲ್ಲಿ 14 ಎಸೆತಗಳಲ್ಲಿ 10 ರನ್ ಗಳಿಸಿದ್ದ ಸಂದರ್ಭದಲ್ಲಿ ಹಿರಿಯ ಆಟಗಾರನಿಗೆ ಕಿರಿ ಮಾದರಿಯ ಅಗ್ನಿಪರೀಕ್ಷೆ ಇದೆನಿಸಿತ್ತು. ಆದರೆ,ಮುಂದಿನ ಐದೇ ಎಸೆತಗಳಲ್ಲಿ ಚಿತ್ರಣವೇ ಬದಲಾಗಿತ್ತು. ಸಮಿತ್ ಪಟೇಲ್ ರ ಒಂದೇ ಓವರ್ ನಲ್ಲಿ ಸತತ 3 ಸಿಕ್ಸರ್ ಸಹಿತ ದ್ರಾವಿಡ್ 21 ರನ್ ಬಾಚಿದ್ದರು (ಇನ್ನೊಂದು ರನ್ ರಹಾನೆ ಹೊಡೆದರು. ಆ ಓವರ್ ನಲ್ಲಿ ಒಟ್ಟು 22 ರನ್). ದ್ರಾವಿಡ್ ಸತತ 3 ಸಿಕ್ಸರ್ ಚಚ್ಚುತ್ತಿರುವಾಗಲಂತೂ ನಂಬಲಾಗದಂಥ ಅನುಭವ. ಏಕದಿನ ಕ್ರಿಕೆಟ್ ನಲ್ಲಿ ಭಾರತದ ಪರ 2ನೇ ಅತ್ಯಂತ ವೇಗದ ಅರ್ಧ ಶತಕ ಬಾರಿಸಿದ್ದರೂ ರಕ್ಷಣಾತ್ಮಕ ಬ್ಯಾಟ್ಸ್ ಮನ್ ಆಗಿಯೇ ವರ್ಚಸ್ಸು ಬೆಳೆಸಿಕೊಂಡಿರುವ ದ್ರಾವಿಡ್, ವೃತ್ತಿಜೀವನದಲ್ಲಿ ಸತತ 3 ಸಿಕ್ಸರ್ ಬಾರಿಸಿದ್ದು ಬಹುಶಃ ಇದೇ ಮೊದಲ ಬಾರಿ ಇರಬೇಕು. ಆದರೆ, ಆ ಮೂರು ಎಸೆತಗಳಲ್ಲಿ ತಾವು ಕೇವಲ ಟೆಸ್ಟ್ ಅಥವಾ ಏಕದಿನಗಳಿಗೆ ಮಾತ್ರ ಸಲ್ಲುವವರಲ್ಲ. ಟಿ20 ಮಾದರಿಯಲ್ಲೂ ಸಲ್ಲುತ್ತೇನೆ ಎಂದು ನಿರೂಪಿಸಿಬಿಟ್ಟರು. ತಂಡದ ಬ್ಯಾಟ್ಸ್ ಮನ್ ಗಳು ಪೂರ್ಣ 20 ಓವರ್ ಸಹ ಆಡುವುದು ಸಾಧ್ಯವಾಗದೆ ಆಲೌಟ್ ಆದರೂ ತಂಡ 165 ರನ್ ಗಳಿಸಿದ್ದರೆ ಅದರಲ್ಲಿ ದ್ರಾವಿಡ್ 3 ಎಸೆತದಲ್ಲಿ ಗಳಿಸಿದ 18 ರನ್ ಗಳ ಪಾತ್ರ ದೊಡ್ಡದು. ಅದಿಲ್ಲವಾದರೆ ಭಾರತದ ಮೊತ್ತ 140-142 ಆಗಿರುತ್ತಿತ್ತೇನೋ.
ಟಿ20 ಕ್ರಿಕೆಟ್ ಎಂದರೆ ತಾಂತ್ರಿಕತೆಯ ಬಗ್ಗೆ ಯೋಚಿಸದೆ ಮೊದಲ ಎಸೆತದಿಂದಲೇ ಹೊಡೆ-ಬಡಿ ಆಟಕ್ಕಿಳಿಯುವುದೇನೋ ಸರಿಯೇ. ಆದರೆ, ಇಲ್ಲಿಯೂ ಪ್ರಾರಂಭದಲ್ಲಿ ಕೆಲವು ಎಸೆತ ಎಚ್ಚರಿಕೆಯಿಂದ ಆಡಿದ ಮೇಲೂ ನಂತರ ಆ ಕೊರತೆ ನೀಗಿಸಬಹುದು ಎಂದು ದ್ರಾವಿಡ್ 21 ಎಸೆತಗಳ 31 ರನ್ ಆಟದಿಂದ ನಿರೂಪಿಸಿದರು. ಒಟ್ಟಾರೆ ಮಾದರಿ ಆಟಗಾರ ದ್ರಾವಿಡ್ ರ ಅಂದಿನ ಆಟ ಮಾದರಿಯಾಗಿತ್ತು.
ಭಾರತ ಸುಲಭವಾಗಿ 180-190 ರನ್ ಗಳಿಸಬಹುದಾಗಿದ್ದ ಇನಿಂಗ್ಸ್ ಅದಾಗಿತ್ತಾದರೂ ಇಂಗ್ಲೆಂಡ್ ನ ಪಿಚ್ ಎಂಬ ಗುಮ್ಮ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ ಮೊದಲಾದವರನ್ನು ಕಾಡಿದ್ದರಿಂದ ತಂಡ ಮುಗ್ಗರಿಸಿತು. ಭಾರತದ ಟಿ20 ಸ್ಕೀಮ್ ನಲ್ಲೇ ಇಲ್ಲದ ಅಜಿಂಕ್ಯ ರಹಾನೆ ಅನಿರೀಕ್ಷಿತವಾಗಿ ದೊರೆತ ಅವಕಾಶ ಸಾರ್ಥಕ ಪಡಿಸಿಕೊಂಡಿದ್ದರಿಂದ ತಂಡ ಗೌರವಾನ್ವಿತ ಮೊತ್ತ ಪೇರಿಸುವುದು ಸಾಧ್ಯವಾಯಿತು. ಇಲ್ಲದಿದ್ದರೆ....
ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯರ ಆಟದಷ್ಟೇ, ತಂಡದ ಆಯ್ಕೆಯೂ ಕಳಪೆ. ಟಿ20 ವಿಶ್ವ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಆಡುವಾಗ ಭಾರತ ಪೂರ್ಣ ಸಾಮರ್ಥ್ಯದ ಟಿ20 ತಂಡವನ್ನೇ ಕಣಕ್ಕಿಳಿಸಬೇಕಿತ್ತು. ಅದಕ್ಕಾಗಿ ಒಂದಿಬ್ಬರು ಆಟಗಾರರನ್ನು ಈ ಪಂದ್ಯಕ್ಕೆಂದೇ ಇಂಗ್ಲೆಂಡ್ ಗೆ ಕರೆಸಿಕೊಂಡಿದ್ದರೆ ಅದರಿಂದ ಬಿಸಿಸಿಐ ಬೊಕ್ಕಸವೇನೂ ಬರಿದಾಗುತ್ತಿರಲಿಲ್ಲ. ಆದರೆ, ಟಿ20 ತಜ್ಞ ಆಟಗಾರರಾದ ಯೂಸುಫ್ ಪಠಾಣ್, ಅಂಬಟಿ ರಾಯುಡು, ಮನೀಶ್ ಪಾಂಡೆ, ರಾಬಿನ್ ಉತ್ತಪ್ಪ, ಮನೋಜ್ ತಿವಾರಿ, ಬದ್ರಿನಾಥ್ (ಚೆನ್ನೈ ಸೂಪರ್ ಕಿಂಗ್ಸ್ ಪರ ಆಟ ಮಾನದಂಡ), ಮೊದಲಾದವರು ದೇಶದಲ್ಲೇ ಉಳಿದರೆ, ಪಾರ್ಥಿವ್ ಪಟೇಲ್, ರಹಾನೆ ಮತ್ತು ದ್ರಾವಿಡ್ ಮೊದಲ 3 ಕ್ರಮಾಂಕದಲ್ಲಿ ಆಡಿದ್ದರು.
ಹೋಗಲಿ, ಒಬ್ಬ ಆಟಗಾರ ಗಾಯಗೊಂಡಾಗ ಆತನಿಗೆ ಬದಲಿ ಆಯ್ಕೆ ಮಾಡುವುದಕ್ಕೂ ಒಂದು ರೀತಿ-ನೀತಿ ಬೇಡವೇ? ಆರಂಭಿಕ ಆಟಗಾರ ಗೌತಮ್ ಗಂಭೀರ್ ಬದಲಿಗೆ ಆಲ್ರೌಂಡರ್ (?) ರವೀಂದ್ರ ಜಡೇಜಾರನ್ನು ಆಯ್ಕೆ ಮಾಡಿದ್ದು ಸರಿಯೇ? ಅಷ್ಟಕ್ಕೂ ಐಪಿಎಲ್ ನಂತರ ಮನೆಯಲ್ಲಿ ಕುಳಿತಿದ್ದ ಜಡೇಜಾ ಬದಲು ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಉದಯೋನ್ಮುಖರ ಕ್ರಿಕೆಟ್ ಟೂರ್ನಿ ಆಡಿ ಬಂದಿದ್ದವರನ್ನೇ ಒಬ್ಬರನ್ನು ಕಳಿಸಬಹುದಿತ್ತು. ಆದರೆ, ಆರ್ ಪಿ ಸಿಂಗ್ ರನ್ನು ಇತ್ತೀಚೆಗೆ ಆಯ್ಕೆ ಮಾಡಿದ್ದಂತೆ ಜಡೇಜಾ ವಿಷಯದಲ್ಲೂ ಆಯ್ಕೆಗಾರರು ಕೋಟಾ ಪದ್ಧತಿ ಅನುಸರಿಸಿರಬಹುದು.
ಸದ್ಯದಲ್ಲೇ ಕೆ. ಶ್ರೀಕಾಂತ್ ಬದಲು ಬೇರೊಬ್ಬರು ರಾಷ್ಟ್ರೀಯ ಮುಖ್ಯ ಆಯ್ಕೆಗಾರರಾಗಿ ನೇಮಕಗೊಳ್ಳಲಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಶ್ರೀಕಾಂತ್ ಮಾಡಿದ ಬ್ಲಂಡರ್ ಗಳಿಂದ ನೂತನ ಆಯ್ಕೆಗಾರರು ಪಾಠ ಕಲಿತಿದ್ದರೆ ಒಳಿತು.
ಏಕೆಂದರೆ ಎಲ್ಲರಿಗೂ ಶ್ರೀಕಾಂತ್ ಗಿದ್ದಂತ ಅದೃಷ್ಟವಂತೂ ಇರುವುದಿಲ್ಲ....


Tuesday, August 30, 2011

ಒಂದೇ ಒಂದು ಸಾರಿ....




ಒಂದಲ್ಲ ಒಂದು ದಿನ
ಪ್ರತಿಯೊಬ್ಬರ ಜೀವನದಲ್ಲೂ
ಏನಾದರೊಂದು ಸಂಕಷ್ಟ
ಎದುರಾಗುವುದು ಖಚಿತ
ಅದನ್ನು ನೀವು ಯಾವ ರೀತಿ
ಎದುರಿಸುತ್ತೀರಿ ಎನ್ನುವುದು
ನಿನ್ನ ಭವಿಷ್ಯದ ಸಂತೋಷ ಮತ್ತು ಯಶಸ್ಸನ್ನು
ನಿರ್ಧರಿಸುತ್ತದೆ....

ಅನಾದಿ ಕಾಲದಿಂದಲೂ
ಎಲ್ಲರೂ
ಇಂಥ ಸಂಕಷ್ಟಗಳ ಹಾದಿಯಲ್ಲೇ
ಸಾಗಿ ಬಂದವರೇ...

ಗಹನವಾಗಿ ನೋಡುವುದಾದರೆ
ಇಂಥ ಸಂಕಷ್ಟದ ಪರಿಸ್ಥಿತಿಗಳು
ಜೀವನದಲ್ಲಿ ಮುನ್ನಡೆಯುವುದಕ್ಕೆ
ಅಥವಾ ಇದ್ದಲ್ಲಿಯೇ ಇರುವುದಕ್ಕೆ
ಅವಕಾಶಗಳು...

ಬದುಕಿನ ಬಹಳಷ್ಟು
ಬದಲಾವಣೆಗಳು
ಒಂದೋ ಸ್ಫೂರ್ತಿಯಿಂದ
ಇಲ್ಲವೇ
ಹತಾಶೆಯಿಂದ
ಆಗಿರುತ್ತವೆ...

ನಮ್ಮ ಹಾದಿಯಲ್ಲಿ ಏನೇ
ಎದುರಾದರೂ
ಅದಕ್ಕೊಂದು ಅರ್ಥ ತುಂಬಬೇಕು
ಅರ್ಥಪೂರ್ಣವೆನಿಸುವಂತೆ
ಮಾರ್ಪಡಿಸಬೇಕು....

ವ್ಯಕ್ತಿಗತ ಬೆಳವಣಿಗೆ
ಎನ್ನುವುದು
ಬದಲಾವಣೆಗೆ ಸಕಾರಾತ್ಮಕವಾಗಿ
ಸ್ಪಂದಿಸುವ
ಪ್ರಕ್ರಿಯೆ...

ಉಳಿಯ ಪೆಟ್ಟಿಗೆ ಸಿಲುಕದೆ
ಕಲ್ಲು ಶಿಲ್ಪವಾಗುವುದಿಲ್ಲ
ಎಡವಿದವನು ಮಾತ್ರ
ಎದ್ದು ನಿಲ್ಲುತ್ತಾನೆ....
(ಆಧಾರ)